×
Ad

ಮಂಗಳೂರು ಗೋಲಿಬಾರ್ ಪ್ರಕರಣ : ಸಿಎಎ ವಿರೋಧಿ ಪ್ರತಿಭಟನೆಯ ಎಲ್ಲ ಕೇಸು ಎನ್‌ಎಚ್‌ಆರ್‌ಸಿಗೆ ವರ್ಗ

Update: 2020-02-04 19:17 IST
ಫೈಲ್ ಚಿತ್ರ

ಮಂಗಳೂರು, ಫೆ.4: ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ವಿರೋಧಿ ಪ್ರತಿಭಟನೆಗಳ ಎಲ್ಲ ಪ್ರಕರಣಗಳನ್ನು ಎನ್‌ಎಚ್‌ಆರ್‌ಸಿ (ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ)ಗೆ ವರ್ಗಾಸುವುದಾಗಿ ರಾಜ್ಯ ಮಾನವ ಹಕ್ಕುಗಳ ಆಯೋಗವು ತಿಳಿಸಿದೆ.

ಮಂಗಳೂರಿನಲ್ಲಿ 2019ರ ಡಿ.19ರಂದು ನಡೆದ ಮಂಗಳೂರು ಗೋಲಿಬಾರ್‌ನಲ್ಲಿ ಅಬ್ದುಲ್ ಜಲೀಲ್ ಮತ್ತು ನೌಶೀನ್ ಎಂಬವರ ಸಾವಿಗೆ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಕಾರಣರಾಗಿದ್ದು, ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಸಲ್ಲಿಸಿದ್ದ ದೂರಿನ ವಿಚಾರಣೆಯನ್ನು ರಾಜ್ಯ ಮಾನವ ಹಕ್ಕುಗಳ ಆಯೋಗವು ಮಂಗಳವಾರ ನಡೆಸಿತು.

ಅರ್ಜಿದಾರರಾದ ಕೆಪಿಸಿಸಿ ಕಾರ್ಯದರ್ಶಿ/ಅಡ್ವೊಕೇಟ್ ರಕ್ಷಿತ್ ಶಿವರಾಂ ಮತ್ತು ಎಐಸಿಸಿ ಸಾಮಾಜಿಕ ಮಾಧ್ಯಮ ವಿಭಾಗದ ರಾಷ್ಟ್ರೀಯ ಸಂಚಾಲಕಿ ಲಾವಣ್ಯಾ ಬಲ್ಲಾಳ್ ಡಿ.26ರಂದು ಆಯೋಗಕ್ಕೆ ದೂರು ಸಲ್ಲಿಸಿದ್ದರು. ಡಿ.31ರಂದು ಮೊದಲ ವಿಚಾರಣೆ ನಡೆದಿತ್ತು. ಬಳಿಕ ಆಯೋಗವು ಫೆ.4ಕ್ಕೆ ಮುಂದೂಡಿತ್ತು. ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಡಿ.ಎಚ್.ವಘೇಲಾ ನೇತೃತ್ವದ ಪೀಠವು ಇಂದು ವಿಚಾರಣೆ ನಡೆಸಿತು.

ಸಿಎಎ ವಿರೋಧಿಸಿ ದೇಶದ ವಿವಿಧೆಡೆ ಹಲವು ಪ್ರತಿಭಟನೆಗಳು ನಡೆದಿದ್ದು, ಹಲವು ಪ್ರಕರಣಗಳು ಎನ್‌ಎಚ್‌ಆರ್‌ಸಿ ಮುಂದೆ ವಿಚಾರಣೆಗೆ ಬಾಕಿ ಉಳಿದಿವೆ. ಹೀಗಾಗಿ ಸಿಎಎ ವಿರೋಧಿಸಿ ನಡೆದ ಪ್ರತಿಭಟನೆಗಳ ಎಲ್ಲ ಪ್ರಕರಣಗಳನ್ನು ಎನ್‌ಎಚ್‌ಆರ್‌ಸಿ ವರ್ಗಾಯಿಸಲು ಆಯೋಗವು ಆದೇಶ ಕಳುಹಿಸಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗವು ಅರ್ಜಿದಾರರಿಗೆ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.

ಗೋಲಿಬಾರ್‌ನಲ್ಲಿ ಗಾಯಗೊಂಡಿದ್ದ ಮಾಜಿ ಮೇಯರ್ ಕೆ.ಅಶ್ರಫ್, ಗುಂಡೇಟಿಗೆ ಬಲಿಯಾದ ಅಬ್ದುಲ್ ಜಲೀಲ್ ಮತ್ತು ನೌಶೀನ್ ಅವರ ಕುಟುಂಬಗಳು ರಾಜ್ಯ ಮಾನವ ಹಕ್ಕುಗಳ ಆಯೋಗದ ವಿಚಾರಣೆಗೆ ಹಾಜರಾಗಿ ಮಹತ್ವದ ಸಾಕ್ಷಗಳನ್ನು ನೀಡಿವೆ ಎಂದು ಮೂಲಗಳು ಖಚಿತಪಡಿಸಿವೆ.

ಸಂತ್ರಸ್ತರ ಪರವಾಗಿ ಅಡ್ವೊಕೇಟ್ ರಕ್ಷಿತ್ ಶಿವರಾಂ ವಾದ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News