×
Ad

ಷೇರು ಮಾರಾಟವು ಎಲ್ಲೈಸಿ ಖಾಸಗೀಕರಣದ ಮೊದಲ ಹೆಜ್ಜೆ : ಅಣ್ಣಯ್ಯ

Update: 2020-02-04 20:03 IST

ಉಡುಪಿ, ಫೆ.4: ಎಲ್‌ಐಸಿಯ ಷೇರುಗಳನ್ನು ಮಾರಾಟ ಮಾಡುವ ಕೇಂದ್ರ ಸರಕಾರದ ನಡೆಯನ್ನು ವಿರೋಧಿಸಿ ಅಖಿಲ ಭಾರತ ವಿಮಾ ನೌಕರರ ಸಂಘ, ಎಲ್‌ಐಸಿ ಅಧಿಕಾರಿಗಳ ಒಕ್ಕೂಟ ಮತ್ತು ಎಲ್‌ಐಸಿ ಅಭಿವೃದ್ಧಿ ಅಧಿಕಾರಿಗಳ ಒಕ್ಕೂಟಗಳ ವತಿಯಿಂದ ಹಮ್ಮಿಕೊಳ್ಳಲಾದ ಪ್ರತಿಭಟನಾ ಮುಷ್ಕರದ ಪ್ರಯುಕ್ತ ಅಜ್ಜರಕಾಡಿನಲ್ಲಿರುವ ಎಲ್‌ಐಸಿ ಉಡುಪಿಯ ವಿಭಾಗೀಯ ಕಚೇರಿ ಆವರಣ ದಲ್ಲಿ ಮಂಗಳವಾರ ಮತ ಪ್ರದರ್ಶನ, ಪ್ರತಿಭಟನೆ ನಡೆಸಲಾಯಿತು.

ಸರಕಾರದ ನಡೆಯನ್ನು ವಿರೋಧಿಸಿ ವಿಭಾಗೀಯ ಕಚೇರಿಯಲ್ಲಿ ದುಡಿಯುತ್ತಿರುವ ನೌಕರರು, ಅಧಿಕಾರಿಗಳು ಹಾಗೂ ಅಭಿವೃದ್ಧಿ ಅಧಿಕಾರಿಗಳು ಒಂದು ಗಂಟೆ ಕಾಲ ‘ಹೊರ ನಡೆ ಮುಷ್ಕರ’ ನಡೆಸಿದರು.

ಈ ಸಂದರ್ಭದಲ್ಲಿ ಎಲ್‌ಐಸಿ ಅಧಿಕಾರಿಗಳ ಸಂಘದ ಉಡುಪಿ ವಿಭಾಗದ ಪ್ರಧಾನ ಕಾರ್ಯದರ್ಶಿ ಅಣ್ಣಯ್ಯ ನೀಲಾವರ ಮಾತನಾಡಿ, ಎಲ್‌ಐಸಿಯ ಷೇರು ಮಾರಾಟವು ಖಾಸಗೀಕರಣ ಮೊದಲ ಹೆಜ್ಜೆಯಾಗಿದೆ. ಎಲ್‌ಐಸಿ ನಷ್ಟದಲ್ಲಿ ನಡೆಯುತ್ತಿರುವ ಸಂಸ್ಥೆ ಅಲ್ಲ. ಪ್ರತಿವರ್ಷ ಶೇ.20ರಷ್ಟು ಆರ್ಥಿಕ ಬೆಳವಣಿಗೆಯನ್ನು ಸಾಧಿಸುತ್ತಿದೆ. ಆದರೂ ಅದರ ಷೇರುಗಳನ್ನು ಮಾರಾಟ ಮಾಡುತ್ತಿರುವುದರಿಂದ ಜನಸಾಮಾನ್ಯರಲ್ಲಿ ಸಾಕಷ್ಟು ಪ್ರಶ್ನೆಗಳು ಹುಟ್ಟುತ್ತಿವೆ ಎಂದು ತಿಳಿಸಿದರು.

ಈ ವರ್ಷ ಎಲ್ಲೈಸಿಯ ಲೈಫ್ ಫಂಡ್ 28 ಸಾವಿರ ಕೋಟಿ ಇದ್ದು, 2019 ಮಾ.31ಕ್ಕೆ ಸರಕಾರದ ಶೇ.5 ಷೇರಿನ ಪಾಲು 2,660ಕೋಟಿ ರೂ.ವನ್ನು ಎಲ್ಲೈಸಿ ಸರಕಾರಕ್ಕೆ ಈಗಾಗಲೇ ನೀಡಿದೆ. ಇಷ್ಟು ಒಳ್ಳೆಯ ರೀತಿಯಲ್ಲಿ ನಡೆಯುತ್ತಿರುವ ಸಂಸ್ಥೆಯನ್ನು ಸರಕಾರ ಯಾಕೆ ಹೀಗೆ ಮಾಡುತ್ತಿದೆ ಎಂಬುದು ಅರ್ಥ ಆಗುತ್ತಿಲ್ಲ. ಸರಕಾರದ ವಿವಿಧ ಯೋಜನೆಗಳಿಗೂ ಸಾಕಷ್ಟು ಹಣವನ್ನು ಎಲ್ಲೈಸಿ ಒದಗಿಸುತ್ತಿದೆ. ಆರ್ಥಿಕ ವಿತ್ತೀಯ ಸಂಕಷ್ಟದಲ್ಲಿರುವ ಸಂಸ್ಥೆಗಳಿಗೂ ಕೂಡ ಎಲ್‌ಐಸಿ ಸಹಾಯವನ್ನು ಮಾಡುತ್ತಿದೆ ಎಂದರು.

ಎಲ್‌ಐಸಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಕಾರ್ಯದರ್ಶಿ ದೇವಪ್ಪ ನಾಯಕ್, ಅಖಿಲ ಭಾರತ ವಿಮಾ ನೌಕರರ ಸಂಘ ಉಡುಪಿ ವಿಭಾಗದ ಅಧ್ಯಕ್ಷ ಕೆ.ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಿ.ಕುಂದರ್, ಮಹಿಳಾ ಉಪಸಮಿತಿಯ ಸಂಚಾಲಕಿ ಪದ್ಮರೇಖಾ ಆಚಾರ್ಯ, ಸಂಘದ ಜತೆ ಕಾರ್ಯದರ್ಶಿ ಕವಿಕಾ ಎಸ್., ಎಲ್‌ಐಸಿ ಎಸ್‌ಸಿಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಗೋಪಾಲ್ ಜಿ.ನಾಯ್ಕಿ, ಸುಂದರ್ ಕಪ್ಪೆಟ್ಟು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News