×
Ad

ಉಡುಪಿ: ಜಿಲ್ಲಾ ಮಟ್ಟದ ಸ್ಕೌಟ್ಸ್, ಗೈಡ್ಸ್ ರ್ಯಾಲಿ

Update: 2020-02-04 20:18 IST

ಉಡುಪಿ, ಫೆ.4: ಪ್ರತಿಯೊಂದು ಮಗುವಿನಲ್ಲಿಯೂ ಒಂದು ವಿಶೇಷವಾದ ಪ್ರತಿಭೆ ಹಾಗೂ ಸಾಮರ್ಥ್ಯವಿರುತ್ತದೆ. ಅದನ್ನು ಗುರುತಿಸಿ ಬೆಳೆಸಿದಾಗ ಆ ಮಗು ಸಮಾಜಕ್ಕೆ ಮಹತ್ತರ ಕೊಡುಗೆಯನ್ನು ನೀಡಬಹುದು ಎಂದು ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯತೀರ್ಥರು ಹೇಳಿದ್ದಾರೆ.

 ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಉಡುಪಿ, ಸ್ಥಳೀಯ ಸಂಸ್ಥೆ ಉಡುಪಿ ಹಾಗೂ ಮುಕುಂದ ಕೃಪಾ ಆಂಗ್ಲ ಮಾಧ್ಯಮ ಶಾಲೆಗಳು ಸಂಯುಕ್ತ ವಾಗಿ ಆಯೋಜಿಸಿದ ಎರಡು ದಿನಗಳ ಉಡುಪಿ ಜಿಲ್ಲಾ ಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ರ್ಯಾಲಿಯನ್ನು ಶ್ರೀಕೃಷ್ಣ ಮಠದ ರಾಜಾಂಗಣ ದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಈ ನಿಟ್ಟಿನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಘಟನೆ ವಿದ್ಯಾರ್ಥಿಗಳ ಪ್ರತಿಭೆಯ ವಿಕಸನ ಹಾಗೂ ಅಭಿವ್ಯಕ್ತಿಗೆ ಉತ್ತಮವಾದ ವೇದಿಕೆಯಾಗಿದೆ ಎಂದು ಅವರು ತಿಳಿಸಿದರು. ಸಮಾರಂದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮುಖ್ಯ ಆಯುಕ್ತೆ ಶಾಂತಾ ವಿ. ಆಚಾರ್ಯ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಎಳೆವಯಸ್ಸಿನಲ್ಲಿಯೇ ದೇಶಭಕ್ತಿಯನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಉಪಾಧ್ಯಕ್ಷ ಎಡ್ವಿನ್ ಆಳ್ವ, ಜಿಲ್ಲಾ ಗೈಡ್ ಆಯುಕ್ತೆ ಜ್ಯೋತಿ ಜೆ ಪೈ, ಮುಕುಂದ ಕೃಪಾ ಶಾಲೆಯ ಮುಖ್ಯ ಶಿಕ್ಷಕಿ ಸೆಲಿನ್ ಕರ್ಕಡ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಅಶ್ವಿನಿ ಪೈ, ಉಡುಪಿ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷೆ ಭಾರತಿ ಚಂದ್ರಶೇಖರ್, ಜಿಲ್ಲಾ ಸಹ ಆಯುಕ್ತ ಕಲ್ಮಾಡಿ ಶೇಖರ್ ಪೂಜಾರಿ, ಎನ್.ಎಸ್.ಅಡಿಗ, ರಾಜ್ಯ ಸಂಘಟನಾ ಆಯುಕ್ತ ಎಂ.ಪ್ರಭಾಕರ್ ಭಟ್, ಐಡಾ ಕರ್ನೆಲಿಯೋ ಉಪಸ್ಥಿತರಿದ್ದರು.

ಜಿಲ್ಲಾ ಸ್ಕೌಟ್ಸ್ ಆಯುಕ್ತ ಡಾ. ವಿಜಯೇಂದ್ರ ವಸಂತ್ ಸ್ವಾಗತಿಸಿದರು. ತರಬೇತಿ ಆಯುಕ್ತ ಆನಂದ ಅಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣೇಶ್ ಜಾಲೂಸೂರ್ ನಿರೂಪಿಸಿದರು. ಶಿಬಿರದ ನಾಯಕಿ ಸುಜಾತ ಶೆಟ್ಟಿ ವಂದಿಸಿದರು.

ಎರಡು ದಿನಗಳ ಕಾಲ ನಡೆದ ಶಿಬಿರದಲ್ಲಿ 750ಕ್ಕಿಂತಲೂ ಹೆಚ್ಚಿನ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸ್ಕೌಟ್ಸ್ ಗೈಡ್ಸ್ ಶಿಕ್ಷಕ-ಶಿಕ್ಷಕಿಯರು, ಶಾಲಾ ಶಿಕ್ಷಕ ವೃಂದ, ಸ್ವಯಂಸೇವಕರು ಭಾಗವಹಿಸಿದ್ದರು. ಜಿಲ್ಲಾ ಸಂಘಟಕರಾದ ನಿತಿನ್ ಅಮಿನ್ ಹಾಗೂ ಸುಮನ್ ಶೇಖರ್ ಕಾರ್ಯಕ್ರಮ ಸಂಘಟಿಸಿದರು.

ಧ್ವಜವಂದನೆ, ಸರ್ವಧರ್ಮ ಪ್ರಾರ್ಥನೆ, ಬೆದರುಗೊಂಬೆ ತಯಾರಿ, ಪಟಾಲಾಂ ಧ್ವಜ ತಯಾರಿ, ಸಾಹಸಮಯ ಆಟಗಳು, ಪ್ರಕೃತಿ ಚಿತ್ರ ರಚನೆ, ಗ್ರೀಟಿಂಗ್ ಕಾರ್ಡ್ ತಯಾರಿ, ಪುರಮೆರವಣಿಗೆ, ಗೂಡುದೀಪ ತಯಾರಿ, ಕಾಲೊರಸು ತಯಾರಿ, ಸುಧಾರಿತ ಗುಡಾರ ತಯಾರಿ, ಜನಪದ ನೃತ್ಯ, ಅಭಿನಯ ಗೀತೆ, ಮುಖವಾಡ ತಯಾರಿ, ಬಿ.ಪಿ ಚಿತ್ರ ರಚನೆ, ಸ್ವಚ್ಚತೆ, ಆಟೋಟ, ದೇಶಭಕ್ತಿ ಗೀತೆ, ಬೆಂಕಿ ಬಳಸಿ ಅಡುಗೆ ತಯಾರಿ, ಬೆಂಕಿ ಬಳಸದೆ ಪಾನೀಯ ತಯಾರಿ, ರಸಪ್ರಶ್ನೆ, ಭವ್ಯಶಿಬಿರಾಗ್ನಿ ಮುಂತಾದ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News