ಬಡ ದೇಶಗಳಲ್ಲಿ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆಯಲ್ಲಿ 81 ಶೇ. ಹೆಚ್ಚಳ

Update: 2020-02-04 15:35 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಫೆ. 4: ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ 2040ರ ವೇಳೆಗೆ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ 81 ಶೇಕಡದಷ್ಟು ಹೆಚ್ಚಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಮಂಗಳವಾರ ಎಚ್ಚರಿಸಿದೆ. ಕ್ಯಾನ್ಸರ್ ತಡೆ ಮತ್ತು ಆರೈಕೆಯ ಮೇಲೆ ಹೂಡಿಕೆ ಕಡಿಮೆಯಾಗುತ್ತಿರುವುದೇ ಇದಕ್ಕೆ ಕಾರಣ ಎಂದು ಅದು ತಿಳಿಸಿದೆ.

ಈ ದೇಶಗಳು ತಮ್ಮ ಸೀಮಿತ ಸಂಪನ್ಮೂಲಗಳನ್ನು ಕ್ಯಾನ್ಸರ್ ವಿರುದ್ಧದ ಹೋರಾಟಕ್ಕೆ ಬದಲಾಗಿ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಮತ್ತು ಬಾಣಂತಿಯರು ಮತ್ತು ಶಿಶುಗಳ ಆರೋಗ್ಯ ಕಾಪಾಡಲು ಬಳಸುತ್ತಿವೆ ಎಂದು ವರದಿಯೊಂದರಲ್ಲಿ ಜಿನೀವದಲ್ಲಿ ನೆಲೆ ಹೊಂದಿರುವ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಈ ದೇಶಗಳಲ್ಲಿ ಕ್ಯಾನ್ಸರ್‌ನಿಂದಾಗಿ ಅತಿ ಹೆಚ್ಚು ಜನರು ಸಾಯುತ್ತಿದ್ದಾರೆ ಎಂಬುದಾಗಿಯೂ ಅದು ಹೇಳಿದೆ.

‘‘ಶ್ರೀಮಂತ ಮತ್ತು ಬಡ ದೇಶಗಳಲ್ಲಿ ಕ್ಯಾನ್ಸರ್ ಆರೈಕೆಯ ಮೇಲೆ ಹೂಡುವ ಹಣದಲ್ಲಿನ ಅಸ್ವೀಕಾರಾರ್ಹ ಅಸಮಾನತೆಯನ್ನು ನಿವಾರಿಸಲು ಇದು ಕರೆಗಂಟೆಯಾಗಿದೆ’’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸಹಾಯಕ ಮಹಾ ನಿರ್ದೇಶಕ ರೆನ್ ಮಿನ್‌ಗುಯಿ ವರದಿಯಲ್ಲಿ ಹೇಳಿದ್ದಾರೆ.

‘‘ಜನರಿಗೆ ಪ್ರಾಥಮಿಕ ಆರೋಗ್ಯ ಮತ್ತು ಶಿಫಾರಸು ವ್ಯವಸ್ಥೆಗಳು ಲಭಿಸುತ್ತಿದ್ದರೆ, ಕ್ಯಾನ್ಸರನ್ನು ಮುಂಚಿತವಾಗಿಯೇ ಗುರುತಿಸಬಹುದಾಗಿದೆ, ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದಾಗಿದೆ ಹಾಗೂ ಗುಣಪಡಿಸಬಹುದಾಗಿದೆ. ಕ್ಯಾನ್ಸರ್ ಎಲ್ಲಿಯೂ ಯಾರಿಗೂ ಮರಣ ದಂಡನೆಯಾಗಬಾರದು’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News