ಸೌದಿ ಪೊಲೀಸರಿಂದ ಬಂಧನಕ್ಕೊಳಗಾದ ಪತಿಯ ಬಗ್ಗೆ ಮಾಹಿತಿಯೇ ಇಲ್ಲ : ಹರೀಶ್ ಪತ್ನಿ ಸುಮನಾ
ಉಡುಪಿ, ಫೆ.4: ಫೇಸ್‌ಬುಕ್‌ನಲ್ಲಿ ಸೌದಿ ದೊರೆ ಹಾಗೂ ಮಕ್ಕಾ ಮಸೀದಿ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವ ಆರೋಪದಡಿ ಸೌದಿ ಪೊಲೀಸರಿಂದ ಬಂಧಿತ ಕುಂದಾಪುರ ತಾಲೂಕಿನ ಕೋಟೇಶ್ವರದ ಬೀಜಾಡಿ ಗ್ರಾಮದ ಗೋಯಾಡಿಬೆಟ್ಟು ನಿವಾಸಿ ಹರೀಶ್ ಬಂಗೇರ (32) ಬಗ್ಗೆ ಮನೆಯವರಿಗೆ ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಈ ಬಗ್ಗೆ ಮಾತನಾಡಿದ ಹರೀಶ್ ಬಂಗೇರ ಪತ್ನಿ ಸುಮನಾ, ನನ್ನ ಪತಿ ಸೌದಿಯಲ್ಲಿ ಬಂಧನಕ್ಕೆ ಒಳಗಾಗಿ ತಿಂಗಳು ಕಳೆದರೂ ಈವರೆಗೆ ಯಾವುದೇ ಸಂಪರ್ಕ ಇಲ್ಲ. ಯಾರ ಬಳಿ ಕೇಳಿದರೂ ಯಾವುದೇ ಮಾಹಿತಿ ಇಲ್ಲ ಎಂದು ಹೇಳುತ್ತಾರೆ. ಸೌದಿಯಲ್ಲಿರುವ ಅವರ ಗೆಳೆಯರು ಕೂಡ ಸಂಪರ್ಕಕ್ಕೆ ಸಿಗುತ್ತಿಲ್ಲ. ಜನಪ್ರತಿನಿಧಿಗಳು ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದು ಮಾತ್ರ ಹೇಳುತ್ತಿದ್ದಾರೆ ಎಂದು ತಿಳಿಸಿದರು.
‘ಸದ್ಯಕ್ಕೆ ಹರೀಶ್ ಬಂಗೇರ ಎಲ್ಲಿ ಇದ್ದಾರೆ ಎಂಬುದು ಗೊತ್ತಿಲ್ಲ. ಮೊದಲು ಇದ್ದ ಸ್ಥಳದಿಂದ ಅವರನ್ನು ಬೇರೆ ಕಡೆ ಕರೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ದೊರೆತಿದೆ. ಸೌದಿಯಲ್ಲಿರುವ ಕೆಲವರು ಈ ಕುರಿತು ಪ್ರಯತ್ನ ಮಾಡುತ್ತಿದ್ದಾರೆ. ಭಾರತೀಯ ರಾಯಭಾರಿ ಕಚೇರಿಯ ಸಂಪರ್ಕದಲ್ಲಿದ್ದು, ಇದಕ್ಕೆ ಬೇಕಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ’ ಎಂದು ಹರೀಶ್ ಬಂಗೇರ ಬಿಡುಗಡೆಗೆ ಶ್ರಮಿಸುತ್ತಿರುವ ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶಾನುಭಾಗ್ ಹೇಳಿದರು.