ಜೆಪ್ಪು ಸಂತ ಆಂತೋನಿಯ ಪುಣ್ಯ ಸ್ಮರಣಿಕೆಗಳ ಹಬ್ಬಕ್ಕೆ ತಯಾರಿ : ಫೆ.6ರಿಂದ ನವೇನ ಪ್ರಾರ್ಥನೆ ಆರಂಭ
ಮಂಗಳೂರು, ಫೆ.4: ಸಂತ ಆಂತೋನಿಯ ಪುಣ್ಯ ಸ್ಮರಣಿಕೆಗಳ ಹಬ್ಬವು ಫೆ.15ರಂದು ಆಚರಿಸಲಾಗುತ್ತಿದ್ದು, ಅದರ ತಯಾರಿಯಾಗಿ ಫೆ.6ರಂದು ನವೇನ ಪ್ರಾರ್ಥನೆ ಆರಂಭಗೊಳ್ಳಲಿದೆ. ಈ ಪ್ರಾರ್ಥನೆಯು 9 ದಿನಗಳವರೆಗೆ ಇರುತ್ತದೆ. ಸಂಜೆ 4:30ಕ್ಕೆ ಅಲಂಕರಿಸಿದ ಸಂತ ಆಂತೋನಿಯವರ ಪ್ರತಿಮೆಯನ್ನು ಮೆರವಣಿಗೆಯಲ್ಲಿ ಜೆಪ್ಪುಸಂತ ಆಂತೋನಿ ಆಶ್ರಮದಿಂದ ಕಂಕನಾಡಿ ವೃತ್ತವಾಗಿ ಮಿಲಾಗ್ರಿಸ್ ಚರ್ಚ್ ತನಕ ಕೊಂಡೊಯ್ಯಲಾಗುವುದು.
ಸಂತ ಜೋಸೆಫ್ ಗುರುಮಠದ ಮುಖ್ಯಸ್ಥ ವಂ. ಡಾ. ರೊನಾಲ್ಡ್ ಸೆರಾವೊ ಪುಣ್ಯಕ್ಷೇತ್ರದ ಧ್ವಜ ಹಾರಿಸಿ ಮೊದಲ ದಿನದ ಬಲಿಪೂಜೆ ಅರ್ಪಿಸುವರು. 9 ದಿನಗಳ ನವೇನ ಪ್ರಾರ್ಥನೆಗೆ ‘ಜೀವ ದೇವರು ಕೊಟ್ಟ ಕೊಡುಗೆ, ಅದನ್ನು ಕಾಯ್ದು ಕಾಪಾಡುವ’ ಎಂಬ ವಿಷಯವನ್ನು ಆಯ್ದುಕೊಳ್ಳಲಾಗಿದೆ. ಹಬ್ಬದ ಬಲಿಪೂಜೆಯನ್ನು ವಿಶ್ರಾಂತ ಬಿಷಪ್ ಅ. ವಂ. ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಫೆ.6ರಂದು ಸಂಜೆ 6ಗಂಟೆಗೆ ಮಿಲಾಗ್ರಿಸ್ ಚರ್ಚ್ ಮೈದಾನದಲ್ಲಿ ಅರ್ಪಿಸುವರು. ಸಂಜೆ 4:30ಕ್ಕೆ ಸಂತ ಜೋಸೆಫ್ ಗುರುಮಠದ ಪ್ರಾಧ್ಯಾಪಕ ವಂ. ಫಾ. ಅಲೆಕ್ಸಾಂಡರ್ ಕಲರಿಕ್ಕಲ್ ಮಲಯಾಳಂ ಭಾಷೆಯಲ್ಲಿ ಬಲಿಪೂಜೆ ಅರ್ಪಿಸುವರು. ಬೆಳಗ್ಗೆ 8:15ಕ್ಕೆ ವ್ಯಾದಿಸ್ತರಿಗಾಗಿ ಫಾ. ಬೊನಿಫಾಸ್ ಪಿಂಟೊ ಬಲಿಪೂಜೆ ಅರ್ಪಿಸುವರು. 11ಕ್ಕೆ ವಂ.ವಾಲ್ಟರ್ ಮೆನ್ಡೊನ್ಸಾ ಅಶ್ರಮದ ನಿವಾಸಿ ಮತ್ತು ವಿಶೇಷ ಆಹ್ವಾನಿತರಿಗಾಗಿ ಬಲಿಪೂಜೆ ಅರ್ಪಿಸುವರು.
ಫೆ.14ರಂದು ಸಂಜೆ ನವೇನ ಬಲಿಪೂಜೆಯ ಬಳಿಕ ಮಿಲಾಗ್ರಿಸ್ ದೇವಾಲಯದ ತೆರೆದ ಮೈದಾನದಲ್ಲಿ ಕಿರು ನಾಟಕ ಪ್ರಸ್ತುತಿ ಇದೆ ಎಂದು ಸಂಸ್ಥೆಯ ನಿರ್ದೇಶಕ ಫಾ.ಒನಿಲ್ ಡಿಸೋಜ ಪ್ರಕಟನೆಯಲ್ಲಿ ತಿಳಿಸಿದ್ದಾರೆ.