×
Ad

11 ಮಾನವ ಹಕ್ಕು ಹೋರಾಟಗಾರರ ವಿರುದ್ಧ ಭಯೋತ್ಪಾದನೆ ನಿಗ್ರಹ ಕಾಯ್ದೆಯಡಿ ಎಫ್‌ಐಆರ್ ದಾಖಲು

Update: 2020-02-04 22:29 IST

ಮುಂಬೈ, ಫೆ.4: ಎಲ್ಗರ್ ಪರಿಷದ್ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಎನ್‌ಐಎ 11 ಮಾನವ ಹಕ್ಕು ಹೋರಾಟಗಾರರ ವಿರುದ್ಧ ಭಯೋತ್ಪಾದನೆ ನಿಗ್ರಹ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಿಸಿದೆ.

  ಇವರಲ್ಲಿ ಮಾವೋವಾದಿ ನಕ್ಸಲರೊಂದಿಗೆ ಸಂಪರ್ಕ ಹೊಂದಿರುವ ಆರೋಪದಲ್ಲಿ ಸುಧೀರ್ ಧವಳೆ, ರೋನಾ ವಿಲ್ಸನ್, ಸುರೇಂದ್ರ ಗಾಡ್ಲಿಂಗ್, ಮಹೇಶ್ ರಾವತ್, ಶೋಮಾ ಸೇನ್, ಅರುಣ್ ಫೆರೇರಾ, ವೆರ್ನಾನ್ ಗೋನ್ಸಾಲ್ವಿಸ್, ಸುಧಾ ಭಾರದ್ವಾಜ್ ಮತ್ತು ವರವರ ರಾವ್ ಈಗ ಜೈಲಿನಲ್ಲಿದ್ದಾರೆ. ಮಾನವ ಹಕ್ಕು ಹೋರಾಟಗಾರರಾದ ಗೌತಮ್ ನವಲಾಖ ಮತ್ತು ಆನಂದ್ ತೇಲ್ತುಂಬ್ಡೆ ಹೆಸರನ್ನೂ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

 ಭಯೋತ್ಪಾದನೆ ನಿಗ್ರಹ ಕಾಯ್ದೆಯ ಸೆಕ್ಷನ್ 13( ಕಾನೂನುಬಾಹಿರ ಕೃತ್ಯ), 16(ಭಯೋತ್ಪಾದಕ ಕೃತ್ಯ), ಸೆಕ್ಷನ್ 18(ಪಿತೂರಿ), ಸೆಕ್ಷನ್ 18ಬಿ( ಭಯೋತ್ಪಾದಕ ಕೃತ್ಯಗಳಿಗೆ ಒಬ್ಬ ವ್ಯಕ್ತಿಯನ್ನು ದಾಖಲು ಮಾಡುವುದು, ಸೆಕ್ಷನ್ 39(ಭಯೋತ್ಪಾದಕ ಸಂಘಟನೆಗಳಿಗೆ ನೆರವು ನೀಡಿದ ಅಪರಾಧ)ದಡಿ ಹಾಗೂ ಐಪಿಸಿಯ 153ಎ ಸೆಕ್ಷನ್(ತಂಡಗಳೊಳಗೆ ದ್ವೇಷ ಭಾವನೆ ಹೆಚ್ಚಿಸಲು ಪ್ರೋತ್ಸಾಹ), ಸೆಕ್ಷನ್ 505(1)(ಬಿ)( ಜನರಲ್ಲಿ ಭೀತಿ ಅಥವಾ ದಿಗಿಲು ಮೂಡಿಸುವ ಉದ್ದೇಶದ ಕೃತ್ಯ), ಸೆಕ್ಷನ್ 117(10ಕ್ಕಿಂತ ಹೆಚ್ಚು ಜನರಿಂದ ದುಷ್ಕೃತ್ಯಕ್ಕೆ ಪ್ರೇರಣೆ )ಗಳಡಿ ಎಫ್‌ಐಆರ್ ದಾಖಲಿಸಲಾಗಿದೆ.

ಇದುವರೆಗೆ ಪ್ರಕರಣದ ತನಿಖೆ ನಡೆಸುತ್ತಿದ್ದ ಪುಣೆ ಪೊಲೀಸರು ಸಂಬಂಧಿತ ಎಲ್ಲಾ ದಾಖಲೆಗಳನ್ನು ಹಸ್ತಾಂತರಿಸಿದ ಬಳಿಕ ಇನ್ನಷ್ಟು ಸೆಕ್ಷನ್‌ಗಳನ್ನು ಅಥವಾ ಇನ್ನಷ್ಟು ಆರೋಪಿಗಳ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರಿಸುವ ಸಾಧ್ಯತೆಯಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News