ಬುಲೆಟ್ ಟ್ರೈನ್ ಯೋಜನೆ ಬಿಳಿಯಾನೆ ಇದ್ದಂತೆ : ಉದ್ಧವ್ ಠಾಕ್ರೆ

Update: 2020-02-04 17:23 GMT

ಮುಂಬೈ, ಫೆ.4: ಮುಂಬೈ-ಅಹ್ಮದಾಬಾದ್ ಮಧ್ಯೆ ಸಂಚರಿಸುವ ಬುಲೆಟ್ ಟ್ರೈನ್ ಯೋಜನೆ ಬಿಳಿಯಾನೆಯಾಗಿದ್ದು ಈ ಯೋಜನೆಯಿಂದ ರಾಜ್ಯದ ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ದೊರಕಲಿದೆ ಎಂಬುದು ಮನದಟ್ಟಾದರೆ ಮಾತ್ರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

  ಶಿವಸೇನೆಯ ಮುಖವಾಣಿ ‘ಸಾಮ್ನ’ದಲ್ಲಿ ಪ್ರಕಟವಾದ ಸಂದರ್ಶನದ ದ್ವಿತೀಯ ಭಾಗದಲ್ಲಿ ಕೇಂದ್ರ ಸರಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಠಾಕ್ರೆ, ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟ ‘ಮಹಾರಾಷ್ಟ್ರ ವಿಕಾಸ ಅಘಾಡಿ’ ಸರಕಾರ ಇರುವ ಮಹಾರಾಷ್ಟ್ರಕ್ಕೆ ಬರಬೇಕಿರುವ ಕೇಂದ್ರ ಸರಕಾರದ ಅನುದಾನ ಲಭ್ಯವಾಗುತ್ತಿಲ್ಲ ಎಂದಿದ್ದಾರೆ.

ಬುಲೆಟ್ ಟ್ರೈನ್‌ನಿಂದ ಯಾರಿಗೆ ಪ್ರಯೋಜನವಾಗಲಿದೆ ? ಇದರಿಂದ ರಾಜ್ಯದ ವ್ಯಾಪಾರೋದ್ಯಮಕ್ಕೆ ಯಾವ ರೀತಿ ಉತ್ತೇಜನ ದೊರಕಲಿದೆ? ಇದರಿಂದ ಪ್ರಯೋಜನವಿದೆ ಎಂದು ನನಗೆ ಮನದಟ್ಟಾದರೆ ಆಗ ಜನರ ಅಭಿಪ್ರಾಯ ಪಡೆದು ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು. ಬುಲೆಟ್ ಟ್ರೈನ್ ಪ್ರಧಾನಿ ಮೋದಿಯ ಕನಸಿನ ಯೋಜನೆಯಾಗಿರಬಹುದು. ಆದರೆ ಎಚ್ಚೆತ್ತುಕೊಂಡ ಮೇಲೆ ನೀವು ವಾಸ್ತವತೆಯನ್ನು ಎದುರಿಸಬೇಕಾಗುತ್ತದೆ. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ಅಭಿವೃದ್ಧಿ ಯೋಜನೆಗಳಿಗೆ ಆದ್ಯತೆ ನೀಡಬೇಕಾಗುತ್ತದೆ.

ಶೂನ್ಯ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ ಎಂಬ ಮಾತ್ರಕ್ಕೆ ತುರ್ತು ಅಗತ್ಯವಿರದ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದರಲ್ಲಿ ಅರ್ಥವಿಲ್ಲ. ಕಾರಣವಿಲ್ಲದೆ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಈ ಬಿಳಿಯಾನೆಗಳನ್ನು ಸಾಕುವುದರಲ್ಲಿ ಅರ್ಥವಿಲ್ಲ. ಇದು ಸರಿಯಲ್ಲ ಎಂದವರು ಹೇಳಿದ್ದಾರೆ.

 ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು ಇದನ್ನು ಜನರ ಮುಂದಿಡಲಿದ್ದೇವೆ. ಈ ಮೊದಲು ರಾಜ್ಯಸರಕಾರ ಹೇಗೆ ಕಾರ್ಯನಿರ್ವಹಿಸಿದೆ ಎಂಬುದು ಅವರಿಗೂ ತಿಳಿಯಲಿ ಎಂದ ಠಾಕ್ರೆ, ಯಾವುದೇ ಕೈಗಾರಿಕೆ ರಾಜ್ಯದಿಂದ ಹೊರಹೋಗಲು ಅವಕಾಶ ನೀಡುವುದಿಲ್ಲ. ಈ ಕೈಗಾರಿಕೆಗಳಿಂದ ಗರಿಷ್ಟ ಸ್ಥಳೀಯರು ಉದ್ಯೋಗ ಪಡೆಯಲಿದ್ದಾರೆ ಎಂದರು.

 ಕಳೆದ ಡಿಸೆಂಬರ್‌ನಲ್ಲಿ ಸರಕಾರ ಘೋಷಿಸಿದ್ದ ಕೃಷಿ ಸಾಲ ಮನ್ನಾ ಯೋಜನೆ ಮುಂದಿನ ತಿಂಗಳಿನಿಂದ ಜಾರಿಗೆ ಬರಲಿದೆ ಮತ್ತು 2 ಲಕ್ಷ ರೂ.ವರೆಗಿನ ಸಾಲವನ್ನು ಮನ್ನಾ ಮಾಡಲಾಗುವುದು. ಎರಡು ಲಕ್ಷ ರೂ.ಗಿಂತ ಹೆಚ್ಚಿನ ಸಾಲ ಮನ್ನಾ ಹಾಗೂ ನಿಯಮಿತವಾಗಿ ಸಾಲ ಮರುಪಾವತಿಸಿದವರಿಗೂ ಹೊಸ ಯೋಜನೆಯೊಂದನ್ನು ಶೀಘ್ರ ಘೋಷಿಸಲಾಗುವುದು. ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಾಲ ಮನ್ನಾ ಪ್ರಥಮ ಹಂತವಾಗಿದ್ದು ರೈತರನ್ನು ಆರ್ಥಿಕವಾಗಿ ಸದೃಢಗೊಳಿಸುವತ್ತ ಆದ್ಯತೆ ನೀಡಲಾಗುವುದು. ಕಡಿಮೆ ಜಾಗದಲ್ಲಿ ಗರಿಷ್ಟ ಬೆಳೆ ಬೆಳೆಯುವ ಯೋಜನೆ ರೂಪಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News