ಪತಿಯಿಂದಲೇ ಪತ್ನಿಗೆ ಜಾತಿ ನಿಂದನೆ; ವರದಕ್ಷಿಣೆ ದೌರ್ಜನ್ಯ ಆರೋಪ: ದೂರು
Update: 2020-02-04 23:09 IST
ಮಂಗಳೂರು, ಫೆ.4: ವಾಮಂಜೂರು ಮಂಗಳಾ ನಗರ ನಿವಾಸಿ ಮಹಿಳೆಯೊಬ್ಬರಿಗೆ ಅವರ ಪತಿಯೇ ಜಾತಿ ನಿಂದನೆ ಮಾಡಿ ದೌರ್ಜನ್ಯ ನಡೆಸಿರುವ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಾಮಂಜೂರು ಮಂಗಳಾ ನಗರ ನಿವಾಸಿ ವಿನೋದ್ (45) ಅವರೇ ಹಲ್ಲೆ ನಡೆಸಿದ ಆರೋಪಿ ಎಂದು ತಿಳಿದುಬಂದಿದೆ.
ಮಹಿಳೆಯು ವಿನೋದ್ ಎಂಬಾತನ ಜತೆ 2005ರಲ್ಲಿ ಪ್ರೀತಿಸಿ ಮದುವೆಯಾಗಿದ್ದು, ಈ ದಂಪತಿಗೆ ಮೂವರು ಮಕ್ಕಳು ಇದ್ದಾರೆ. ಆರೋಪಿ ತನ್ನ ಪತ್ನಿಗೆ ‘ನೀನು ಪರಿಶಿಷ್ಟ ಜಾತಿಯವಳು, ನನಗೆ ಯಾವುದೇ ವರದಕ್ಷಿಣೆ ನೀಡಲಿಲ್ಲ. ಬೇರೆಯವರಾದರೆ ವರದಕ್ಷಿಣೆ ನೀಡುತ್ತಿದ್ದರು’ ಎಂದು ಹೇಳಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದಾರೆ. ಅಲ್ಲದೆ, ‘ಬೇರೆ ಹುಡುಗಿಯನ್ನು ಮದುವೆಯಾಗುತ್ತೇನೆ’ ಎಂದು ಹೆದರಿಸಿ ಮನೆಯಿಂದ ಹೊರಗೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.