ಫೆ. 9ರಂದು ಬ್ರಹ್ಮಕುಮಾರಿ ಶಿವಾನಿಯಿಂದ ಪ್ರವಚನ
ಮಂಗಳೂರು, ಫೆ.5: ಆಧ್ಯಾತ್ಮಿಕ ಮಾರ್ಗದರ್ಶಕಿ ಹಾಗೂ ಪ್ರಶಿಕ್ಷಕಿ ಬ್ರಹ್ಮಾಕುಮಾರಿ ಶಿವಾನಿ ಅವರು ಮಂಗಳೂರಿಗೆ ಆಗಮಿಸಲಿದ್ದು, ಫೆ.9ರಂದು ನಗರದ ಟಿಎಂಎ ಪೈ ಕನ್ವೆನ್ಷನ್ ಸೆಂಟರ್‌ನಲ್ಲಿ ಆಧ್ಯಾತ್ಮಿಕ ಪ್ರವಚನ ನೀಡಲಿದ್ದಾರೆ ಎಂದು ಮಂಗಳೂರಿನ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ಬಿ.ಕೆ. ವಿಶ್ವೇಶ್ವರಿ ಅವರು ತಿಳಿಸಿದ್ದಾರೆ.
ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.9ರಂದು ಬೆಳಗ್ಗೆ 10.30 ರಿಂದ 12.30ವರೆಗೆ ‘ಆರೋಗ್ಯ ಸಂತೋಷ ಮತ್ತು ಸಾಮರಸ್ಯ’ ಎಂಬ ವಿಷಯದ ಬಗ್ಗೆ ಮತ್ತು ಸಂಜೆ 5.30ರಿಂದ 7.30ರವರೆಗೆ ‘ಶಾಂತಿಗಾಗಿ ಸ್ವಲ್ಪ ನಿಲ್ಲಿ’ ಎಂಬ ವಿಷಯದ ಬಗ್ಗೆ ಆಧ್ಯಾತ್ಮಿಕ ಪ್ರವಚನ ನೀಡಲಿದ್ದಾರೆ. ಮಂಗಳೂರಿನಲ್ಲಿ ಶಿವಾನಿ ಅವರ ಎರಡನೆಯ ಕಾರ್ಯಕ್ರಮ ಇದಾಗಿದ್ದು, 2010 ರಲ್ಲಿ ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ಅವರು ಆಗಮಿಸಿದ್ದರು ಎಂದು ಹೇಳಿದರು.
ಕಾರ್ಯಕ್ರಮಗಳಿಗೆ ಬರುವ ಇಚ್ಛಿಸುವವರು ತಮ್ಮ ಹೆಸರನ್ನು ಉರ್ವಾಸ್ಟೋರ್‌ನಲ್ಲಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ನೋಂದಾಯಿಸಿ ಪ್ರವೇಶದ ಪಾಸನ್ನು ಪಡೆದುಕೊಳ್ಳಬಹುದು. ಈಗಾಗಲೇ 4,000 ಮಂದಿ ಪಾಸ್ ಪಡೆದುಕೊಂಡಿದ್ದಾರೆ. ಶಿವಾನಿ ಅವರು ಫೆ.6ರಂದು ಮಂಗಳೂರಿಗೆ ಆಗಮಿಸಲಿದ್ದಾರೆ ಎಂದರು.
ಶಿವಾನಿಯ ಅವರು ತಮ್ಮ 22 ನೇ ವಯಸ್ಸಿನಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದು ಚಿನ್ನದ ಪದಕ ವಿಜೇತೆಯಾಗಿ ಎರಡು ವರ್ಷಗಳ ಕಾಲ ಪುಣೆಯಲ್ಲಿರುವ ಭಾರತೀಯ ವಿದ್ಯಾಪೀಠದಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಪ್ರಾರಂಭಿಸಿದ್ದರು. ನಂತರ 2003ರಲ್ಲಿ ಬ್ರಹ್ಮಾಕುಮಾರಿ ಸಂಸ್ಥೆಯಲ್ಲಿ ಕಲಿಸುವ ರಾಜಯೋಗ ಶಿಕ್ಷಣದಿಂದ ಆಕರ್ಷಿತರಾಗಿ ಅದರ ಆಳವಾದ ಅಧ್ಯಯನವನ್ನು ಮಾಡಿದರು. ಶಿವಾನಿಯವರು ಕಳೆದ ವರ್ಷ ಭಾರತದ ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಂದ ನಾರಿ ಶಕ್ತಿ ಸಮ್ಮಾನ ತಮ್ಮ ಮುಡಿಗೇರಿಸಿಕೊಂಡಿದ್ದಾರೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕುಮಾರ ರೋಶನ್, ಆಪ್ತ ಸಮಾಲೋಚಕಿ ರೇವತಿ, ಕೆ. ವರದರಾಜ ಪ್ರಭು ಇದ್ದರು.