ಪರಿಶಿಷ್ಟ ಜಾತಿ/ಪಂಗಡದ ಮುಖಂಡರಿಂದ ಅಹವಾಲು ಸ್ವೀಕೃತಿ, ಸಮಾಲೋಚನಾ ಸಭೆ
ಉಡುಪಿ, ಫೆ.5:ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಈಗಿರುವ ಮೀಸಲಾತಿಯನ್ನು ಹೆಚ್ಚಿಸುವ ಕುರಿತು ವರದಿ ನೀಡಲು ನ್ಯಾ.ಎಚ್.ಎನ್. ನಾಗಮೋಹನದಾಸ್‌ರ ಏಕ ದಸ್ಯ ಆಯೋಗವನ್ನು ರಚಿಸಲಾಗಿದೆ.
ಆಯೋಗದ ಅಧ್ಯಕ್ಷರಾದ ಎಚ್.ಎನ್.ನಾಗಮೋಹನ ದಾಸ್ ಅವರು ಫೆ.10ರಂದು ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕರ್ನಾಟಕ ಕಲಾ ಮಂದಿರದಲ್ಲಿ ಬೆಳಗ್ಗೆ 10:30ಕ್ಕೆ ಮೈಸೂರು ವಿಭಾಗದ ಎಲ್ಲಾ ಜಿಲ್ಲೆಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಮುಖಂಡರು ಮತ್ತು ಸಂಘಟನೆಗಳಿಂದ ಅಹವಾಲು ಸ್ವೀಕೃತಿ ಮತ್ತು ಸಮಾಲೋಚನಾ ಸಬೆಯನ್ನು ಆಯೋಜಿಸಿದ್ದು, ಉಡುಪಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಲು ಆಹ್ವಾನಿಸಲಾಗಿದೆ.
ಸಭೆಯಲ್ಲಿ ಸಂಘಟನೆಗಳ ಮುಖಂಡರು ಮತ್ತು ಸಂಘಸಂಸ್ಥೆಗಳ ಅಹವಾಲು ಗಳನ್ನು ಲಿಖಿತ ರೂಪದಲ್ಲಿ ನೀಡಬಹುದು. ಮೌಖಿಕವಾಗಿ ವಿಚಾರ/ ಅಭಿಪ್ರಾಯ ತಿಳಿಸಬಯಸುವವರು ಕಾರ್ಯಕ್ರಮ ಪ್ರಾರಂಭವಾಗುವ ಒಂದು ಗಂಟೆ ಮೊದಲು ಅದಕ್ಕಾಗಿ ತೆರೆಯಲಾಗಿರುವ ಕೌಂಟರ್‌ಗಳಲ್ಲಿ ಹೆಸರುಗಳನ್ನು ನೊಂದಾಯಿಸಿಕೊಳ್ಳಬೇಕು. ಹೆಸರನ್ನು ನೊಂದಾಯಿಸಿಕೊಂಡವರಿಗೆ ಮಾತ್ರ ಸಮಾವೇಶದಲ್ಲಿ ತಮ್ಮ ಅಭಿಪ್ರಾಯವನ್ನು ಮೌಖಿಕವಾಗಿ ತಿಳಿಸಲು ಅವಕಾಶ ನೀಡಲಾಗುತ್ತದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಉಡುಪಿಜಿಲ್ಲೆ ಹಾಗೂ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಉಡುಪಿ, ಕುಂದಾಪುರ ಮತ್ತು ಕಾರ್ಕಳ ತಾಲೂಕು ಇವರನ್ನು ಸಂಪರ್ಕಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರ ಪ್ರಕಟಣೆ ತಿಳಿಸಿದೆ.