×
Ad

ಫೆ.10ಕ್ಕೆ ವೆಲ್ಫೇರ್ ಪಾರ್ಟಿಯಿಂದ ‘ಪಾರ್ಲಿಮೆಂಟ್ ಮಾರ್ಚ್’

Update: 2020-02-05 21:32 IST

ಉಡುಪಿ, ಫೆ.5: ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದೇಶಾದ್ಯಂತ ‘ಸಂವಿಧಾನ ಉಳಿಸಿ, ಪೌರತ್ವ ರಕ್ಷಿಸಿ’ ಅಭಿಯಾನ ಹಮ್ಮಿಕೊಂಡಿದ್ದು, ಇದರ ಸಮಾರೋಪ ಫೆ.10ರಂದು ಹೊಸದಿಲ್ಲಿಯಲ್ಲಿ ಪಾರ್ಲಿಮೆಂಟ್ ಮಾರ್ಚ್‌ನೊಂದಿಗೆ ನಡೆಯಲಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ರಾಜ್ಯಾಧ್ಯಕ್ಷ ತಾಹೀರ್ ಹುಸೈನ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಎ ಕಾಯ್ದೆ ದೇಶದ ಸಂವಿಧಾನದ ಮೂಲ ಆಶಯಕ್ಕೆ ಹಾಗೂ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿದ್ದು, ಜಾತಿ ತಾರತಮ್ಯದಿಂದ ಕೂಡಿದೆ. ಇದು ಭಾರತದ ಜಾತ್ಯಾತೀತ ಪರಂಪರೆಗೆ ಕೊನೆ ಹಾಡಲಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ತಮ್ಮ ಪಕ್ಷ ಸಿಎಎಯನ್ನು ವಿರೋಧಿಸುವುದರ ಜೊತೆಗೆ ಎನ್‌ಆರ್‌ಸಿ ಹಾಗೂ ಎನ್‌ಪಿಆರ್‌ಗಳನ್ನು ಇಡೀ ದೇಶದಲ್ಲಿ ಜಾರಿಗೆ ತಂದಿರುವುದನ್ನು ವಿರೋಧಿಸುತ್ತದೆ. ಈ ಬಗ್ಗೆ ಕೇಂದ್ರ ಸರಕಾರ ಸಂಸತ್‌ನಲ್ಲಿ ಜನರನ್ನು ದಾರಿ ತಪ್ಪಿಸುವ ಹೇಳಿಕೆಯನ್ನು ನೀಡಿದೆ. ಈಗಾಗಲೇ ಸರಕಾರ ಎಪ್ರಿಲ್ ತಿಂಗಳಿನಿಂದ ಎನ್‌ಆರ್‌ಸಿ ಪ್ರಕ್ರಿಯೆ ಆರಂಭಿಸಲು 5000 ಕೋಟಿ ರೂ.ಗಳನ್ನು ಡಿ.24ರಂದು ಬಿಡುಗಡೆಗೊಳಿಸಿದೆ. ಎನ್‌ಪಿಆರ್‌ನ ಉದ್ದೇಶವೇ ಎನ್‌ಆರ್‌ಸಿ ಯನ್ನು ಪ್ರಾರಂಭಿಸುವುದಾಗಿದೆ ಎಂದು ತಾಹೀರ್ ಹುಸೈನ್ ಹೇಳಿದರು.

ಸಿಎಎ 1955ರ ಕಾಯ್ದೆ ಹಾಗೂ ನಂತರ ತಂದಿರುವ ತಿದ್ದುಪಡಿಗಳಿಗೆ ನಮ್ಮ ಪಕ್ಷದ ವಿರೋಧವಿಲ್ಲ. ಆದರೆ 2019ರಲ್ಲಿ ಎನ್‌ಡಿಎ ಸರಕಾರ ತಂದಿರುವ ಕಾಯ್ದೆ ಸಂವಿಧಾನಕ್ಕೆ ವಿರುದ್ಧವಾದ ಅಂಶಗಳಿರುವುದರಿಂದ ಅದಕ್ಕೆ ನಮ್ಮ ತೀವ್ರ ವಿರೋಧವಿದೆ ಎಂದರು.

ವೆಲ್ಫೇರ್ ಪಾರ್ಟಿಯು ಎನ್‌ಪಿಆರ್‌ನ್ನು ಬಲವಾಗಿ ವಿರೋಧಿಸುತಿದ್ದು, ಯಾವುದೇ ಕಾರಣಕ್ಕೂ ಎನ್‌ಪಿಆರ್ ಜಾರಿಗೆ ಬರಬಾರದು ಎಂದು ಆಗ್ರಹಿಸುತ್ತದೆ. ತಮ್ಮ ಪಕ್ಷ ಈಗಾಗಲೇ ಇದನ್ನು ಪ್ರಶ್ನಿಸಿ ಡಿ.25ರಂದು ಸುಪ್ರೀಂ ಕೋರ್ಟಿಗೆ ರಿಟ್‌ಅರ್ಜಿ ಸಲ್ಲಿಸಿದೆ ಎಂದವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಕರ್ನಾಟಕ ಪ್ರಾದೇಶಿಕ ಕಾರ್ಯದರ್ಶಿ ಸುಲೈಮಾನ್ ಕಲ್ಲರ್ಪೆ, ಉಡುಪಿ ಜಿಲ್ಲಾಧ್ಯಕ್ಷರಾದ ಅಬ್ದುಲ್ ಅಝೀಝ್ ಉದ್ಯಾವರ್, ಮಾಜಿ ಜಿಲ್ಲಾಧ್ಯಕ್ಷ ಅನ್ವರ್ ಅಲಿ ಕಾಪು, ಜಿಲ್ಲಾ ಕಾರ್ಯಾಧ್ಯಕ್ಷ ರಿಯಾಝ್ ಅಹ್ಮದ್ ಹಾಗೂ ಉಪಾಧ್ಯಕ್ಷರಾದ ಶಹಜಹನ್ ತೋನ್ಸೆ ಉಪಸ್ಥಿತ ರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News