ಪರಿಶಿಷ್ಟರ ಮೀಸಲಾತಿ ಹೆಚ್ಚಳಕ್ಕೆ ಆಯೋಗ ರಚನೆ: ಫೆ.10ಕ್ಕೆ ಮೈಸೂರಿನಲ್ಲಿ ಸಮಾಲೋಚನಾ ಸಭೆ
ಮಂಗಳೂರು, ಫೆ.5: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಮತ್ತು ಸರಕಾರಿ, ಸಾರ್ವಜನಿಕ ಉದ್ಯೋಗ ಗಳಿಗೆ ಈಗಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಕುರಿತು ವರದಿ ನೀಡಲು ನ್ಯಾ.ಎಚ್.ಎನ್. ನಾಗಮೋಹನದಾಸ್ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿ ರಾಜ್ಯ ಸರಕಾರ ಆದೇಶ ನೀಡಿದೆ.
ನ್ಯಾ.ಎಚ್.ಎನ್. ನಾಗಮೋಹನದಾಸ್ ಅಧ್ಯಕ್ಷತೆಯಲ್ಲಿ ಫೆ.10ರಂದು ಬೆಳಗ್ಗೆ 10:30ಕ್ಕೆ ಮೈಸೂರು ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕರ್ನಾಟಕ ಕಲಾ ಮಂದಿರದಲ್ಲಿ ಮೈಸೂರು ವಿಭಾಗದ ಎಲ್ಲ ಜಿಲ್ಲೆಗಳ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ಮುಖಂಡರು ಮತ್ತು ಸಂಘಟನೆಗಳಿಂದ ಅಹವಾಲು ಸ್ವೀಕೃತಿ ಮತ್ತು ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿದೆ.
ಸಭೆಯಲ್ಲಿ ಭಾಗವಹಿಸಿ ಅಮೂಲ್ಯವಾದ ಸಲಹೆ ಮತ್ತು ಅಹವಾಲುಗಳನ್ನು ಲಿಖಿತ ರೂಪದಲ್ಲಿ ನೀಡಬಹುದು. ಸಮಾಲೋಚನಾ ಸಭೆಯಲ್ಲಿ ಮೌಖಿಕವಾಗಿ ವಿಚಾರ ಅಥವಾ ಅಭಿಪ್ರಾಯವನ್ನು ತಿಳಿಸಲು ಕಾರ್ಯಕ್ರಮ ಪ್ರಾರಂಭವಾಗುವ ಒಂದು ಗಂಟೆ ಮೊದಲು ಸಮಾಲೋಚನಾ ಸಭೆ ನಡೆಯುವ ಸ್ಥಳದ ಹೊರಗಡೆ ಅದಕ್ಕಾಗಿ ತೆರೆಯಲಾಗುವ ಜಿಲ್ಲಾವಾರು ಕೌಂಟರ್‌ಗಳಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಸಮಾಜ ಕಲ್ಯಾಣ ಇಲಾಖೆಯ ಪ್ರಕಟನೆ ತಿಳಿಸಿದೆ.