×
Ad

ಕೊರೊನಾ ವೈರಸ್ ವಿರುದ್ಧದ ಯೋಜನೆಗೆ 4825 ಕೋಟಿ ರೂ. ದೇಣಿಗೆ: ವಿಶ್ವ ಆರೋಗ್ಯ ಸಂಸ್ಥೆಯಿಂದ ಮನವಿ

Update: 2020-02-06 22:49 IST

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಫೆ. 6: ನೂತನ ಕೊರೋನವೈರಸ್ ಸೋಂಕಿನ ವಿರುದ್ಧ ಹೋರಾಡುವ ಯೋಜನೆಗಾಗಿ 675 ಮಿಲಿಯ ಡಾಲರ್ (ಸುಮಾರು 4825 ಕೋಟಿ ರೂಪಾಯಿ) ದೇಣಿಗೆಯ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಬುಧವಾರ ಹೇಳಿದೆ.

 ‘‘ಇಂದು ನಾವು ಸಿದ್ಧತೆ ಮತ್ತು ಪ್ರತಿಕ್ರಿಯೆ ಯೋಜನೆಯೊಂದನ್ನು ಆರಂಭಿಸುತ್ತಿದ್ದೇವೆ. ಈ ಯೋಜನೆಗೆ ಮುಂದಿನ ಮೂರು ತಿಂಗಳಲ್ಲಿ 675 ಮಿಲಿಯ ಡಾಲರ್ ನಿಧಿ ಒದಗಿಸುವಂತೆ ನಾವು ಮನವಿ ಮಾಡುತ್ತೇವೆ’’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅದನಾಮ್ ಗೆಬ್ರಿಯೇಸಸ್ ಜಿನೀವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘‘ಯೋಜನೆಯಲ್ಲಿ ಇಂದು ಹೂಡಿಕೆ ಮಾಡಿ ಅಥವಾ ಮುಂದಕ್ಕೆ ಹೆಚ್ಚು ದೇಣಿಗೆ ಕೊಡಿ ಎನ್ನುವುದು ನಮ್ಮ ಸಂದೇಶವಾಗಿದೆ’’ ಎಂದು ಟೆಡ್ರೋಸ್ ಹೇಳಿದರು. ‘‘ಇಂದು ನಾವು ಸಿದ್ಧತೆಯ ಮೇಲೆ ಹಣ ತೊಡಗಿಸದಿದ್ದರೆ, ಮುಂದೆ ನಾವು ಪಾವತಿಸಬೇಕಾದ ಬಿಲ್ ಮೊತ್ತ ಅಧಿಕವಾಗಿರುತ್ತದೆ’’ ಎಂದರು.

 ಈ ಮೊತ್ತದಲ್ಲಿ 60 ಮಿಲಿಯ ಡಾಲರ್ (ಸುಮಾರು 427 ಕೋಟಿ ರೂಪಾಯಿ) ಮೊತ್ತವನ್ನು ಮಾತ್ರ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯನಿರ್ವಹಣೆಗಾಗಿ ಬಳಸಲಾಗುತ್ತದೆ ಹಾಗೂ ಉಳಿದ ಮೊತ್ತವು ಕೊರೋನವೈರಸ್ ವಿರುದ್ಧ ರಕ್ಷಣೆಗಾಗಿ ನೆರವು ಅಗತ್ಯವಿರುವ ದೇಶಗಳಿಗೆ ಹೋಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News