×
Ad

ಎನ್‌ಡಿಎ ನೇತೃತ್ವದ ಮೋದಿ ಸರಕಾರದಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ: ಬಿಎಲ್ ಶಂಕರ್

Update: 2020-02-06 22:52 IST

ಮಂಗಳೂರು, ಫೆ.6: ಎನ್‌ಡಿಎ ನೇತೃತ್ವದ ಮೋದಿ ಸರಕಾರದಿಂದ ದೇಶಾದ್ಯಂತ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗುತ್ತಿದೆ. ದೇಶದ ಸಂವಿಧಾನದಡಿ ಸ್ಥಾಪಿಸಲಾದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ), ಚುನಾವಣಾ ಆಯೋಗ ಮೊದಲಾದುವುಗಳನ್ನು ಕೇಂದ್ರ ಸರಕಾರ ತನ್ನ ಸುಪರ್ದಿಗೆ ಪಡೆಯುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ಮಾಜಿ ಸಚಿವ ಬಿ.ಎಲ್. ಶಂಕರ್ ಆರೋಪಿಸಿದರು.

ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರೋಧಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಕುಲಶೇಖರದಲ್ಲಿ ಗುರುವಾರ ನಡೆದ ಜಾಗೃತಿ ಕಾರ್ಯಾ ಗಾರದಲ್ಲಿ ಅವರು ಮಾತನಾಡಿದರು.

ಕಾನೂನು ರೂಪಿಸುವಾಗ ಮತ್ತು ತಿದ್ದುಪಡಿ ಮಾಡುವಾಗ ಸಂವಿಧಾನ ಮತ್ತು ಧರ್ಮಕ್ಕೆ ಬದ್ಧವಾಗಿರಬೇಕು. ಪೌರತ್ವ ತಿದ್ದುಪಡಿ ಕಾಯ್ದೆಯು ಧರ್ಮಕ್ಕೆ ವಿರುದ್ಧವಾಗಿದೆ. ದೇಶದಲ್ಲಿ ಪೌರತ್ವ ಕಾನೂನುಗಳನ್ನು ಕೇಂದ್ರ ಸರಕಾರ ಮಾಡಿದ್ದು ದೇಶಪ್ರೇಮದಿಂದ ಅಲ್ಲ. ಈ ವಿಚಾರವನ್ನೇ ಮುಂದಿಟ್ಟುಕೊಂಡು ಇನ್ನೆರಡು ಚುನಾವಣೆಗಳನ್ನು ಗೆಲ್ಲುವ ಹುನ್ನಾರವಾಗಿದೆ. ದೇಶಕ್ಕೆ ಸ್ವಾತಂತ್ರ ಬಂದ 73 ವರ್ಷಗಳ ಬಳಿಕ ಇಲ್ಲಿರುವ ಮುಸ್ಲಿಮರನ್ನು ಅನುಮಾನದಿಂದ ನೋಡುತ್ತಿರುವುದು ವಿಪರ್ಯಾಸ. ಧರ್ಮಾಧಾರಿತವಾಗಿ ಕಾನೂನು ರೂಪಿಸಿ, ಭಾವನಾತ್ಮಕವಾಗಿ ಜನರನ್ನು ಸೆಳೆದು ಚುನಾವಣೆ ಗೆಲ್ಲಲು ಬಿಜೆಪಿ ಹೊರ ತಂತ್ರ ಹೂಡಿದೆ ಎಂದು ಬಿಎಲ್ ಶಂಕರ್ ಹೇಳಿದರು.

ಬಡವರಿಗೆ ತೊಂದರೆ: ನುಸುಳುಕೋರರಾಗಿ ದೇಶಕ್ಕೆ ಬಂದ ಕೆಲವು ಮಂದಿಯನ್ನು ಹುಡುಕುವುದಕ್ಕಾಗಿ ದೇಶದಲ್ಲಿರುವ 130 ಕೋಟಿ ಜನರಿಗೆ ತೊಂದರೆ ನೀಡುವುದು ಸರಿಯಲ್ಲ. ಅಸ್ಸಾಂನಲ್ಲಿ ಎನ್‌ಆರ್‌ಸಿ ಜಾರಿಗೊಳಿಸಿದಂತೆ ಇಡೀ ದೇಶದಲ್ಲಿ ಜಾರಿಗೊಳಿಸಲು ವ್ಯರ್ಥ ಕಸರತ್ತು ಮಾಡಲಾಗುತ್ತದೆ. ಇದರಿಂದ ಯಾವ ಪ್ರಯೋಜನವೂ ಆಗದು. ದೇಶದಲ್ಲಿರುವ ಶೇ.70ರಷ್ಟು ಜನತೆ ಹಳ್ಳಿಗಳಲ್ಲಿ ವಾಸವಾಗಿದ್ದಾರೆ. ಅವರಲ್ಲಿ ಭೂಮಿ ಇರುವವರು ಶೇ.20ಕ್ಕಿಂತಲೂ ಕಡಿಮೆ. ದೇಶದ ಶೇ.50ರಷ್ಟು ಜನತೆ ಕೂಲಿ ಕಾರ್ಮಿಕರು. ಎನ್‌ಆರ್‌ಸಿ ಜಾರಿಯಾದರೆ ಬಹುದೊಡ್ಡ ಏಟು ಬೀಳುವುದು ಬಡವರಿಗೆ ಮಾತ್ರ. ಕೇವಲ ಅಲ್ಪಸಂಖ್ಯಾತರೇ ಎಂದುಕೊಂಡರೆ ಅದು ಕೇಂದ್ರ ಸರಕಾರದ ಭ್ರಮೆ ಎಂದು ಬಿ.ಎಲ್. ಶಂಕರ್ ಟೀಕಿಸಿದರು.

ಸಂವಿಧಾನ ವಿರೋಧಿ ನಿಲುವು: ಭಾರತೀಯ ಪೌರತ್ವ ಕಾಯ್ದೆ 1955ರಲ್ಲಿ ಜಾರಿಯಾದ ಬಳಿಕ ಹಲವು ಬಾರಿ ತಿದ್ದುಪಡಿಯಾಗಿದೆ. ಈ ಯಾವ ಸಂದರ್ಭದಲ್ಲೂ ಜಾತಿ, ಧರ್ಮಗಳ ಪ್ರಸ್ತಾಪವೇ ಇರಲಿಲ್ಲ. ಆದರೆ ಈಗ ಇದೇ ಮೊದಲ ಬಾರಿಗೆ ಧರ್ಮಾಧಾರಿತವಾಗಿ ಕಾನೂನು ರೂಪಿಸಲಾ ಗಿದೆ. ಒಂದು ಧರ್ಮವನ್ನು ಮಾತ್ರ ಹೊರಗಿಡುವುದು ಸಂವಿಧಾನ ವಿರೋಧಿಯಾಗಿದೆ ಎಂದು ಶಂಕರ್ ಆರೋಪಿಸಿದರು.

ದೇಶದಲ್ಲಿ ಮೂಲನಿವಾಸಿಗಳನ್ನು ಗುರುತಿಸಲು ಆಗುವುದಿಲ್ಲ. ಅಮೆರಿಕದಲ್ಲಿ ಮೂಲ ನಿವಾಸಿಗಳು ಯಾರೂ ಇಲ್ಲ. ಆಸ್ಟ್ರೇಲಿಯಾವನ್ನು ಕಟ್ಟಿದ್ದೇ ಶೇ.90ರಷ್ಟು ವಲಸಿಗರು. ಅದೇ ರೀತಿ ಭಾರತಕ್ಕೂ ಅನೇಕ ಕಡೆಗಳಿಂದ ಜನರು ಬಂದಿದ್ದಾರೆ. ಇಲ್ಲೇ ಬದುಕು ಕಟ್ಟಿಕೊಂಡಿದ್ದಾರೆ. ವಲಸೆ ಹೋಗುವುದು ಮನುಷ್ಯನ ಸಹಜ ಪ್ರವೃತ್ತಿ ಎನ್ನುವುದನ್ನು ಬಿಜೆಪಿಗೆ ತಿಳಿಯದ ವಿಚಾರವೇನಲ್ಲ. ಎನ್‌ಆರ್‌ಸಿಯಿಂದ ದೇಶದಲ್ಲಿದ್ದ ಯಾರಿಗೂ ತೊಂದರೆ ಆಗುವುದಿಲ್ಲ ಎನ್ನುವುದಾದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ತದ್ವಿರುದ್ಧ ಹೇಳಿಕೆಗಳನ್ನು ಯಾಕೆ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಹೋರಾಟದ ಫಲವಾಗಿ ರಾಷ್ಟ್ರಧ್ವಜ ಹಿಡಿದರು: ಎಂದಿಗೂ ಸ್ವಾತಂತ್ರ ದಿನಾಚರಣೆ ಆಚರಿಸಿಕೊಳ್ಳದಿರುವವರು ಈಗ ಸಿಎಎ ಹೋರಾಟದ ಪರಿಣಾಮವಾಗಿ ಒಂದು ಕೈಯಲ್ಲಿ ರಾಷ್ಟ್ರ ಧ್ವಜ, ಇನ್ನೊಂದು ಕೈಯಲ್ಲಿ ಸಂವಿಧಾನ ಹಿಡಿಯತೊಡಗಿದ್ದಾರೆ. ಇದು ದೇಶಾದ್ಯಂತ ಜನರ ಹೋರಾ ಟದ ಫಲ ಎಂದು ವ್ಯಾಖ್ಯಾನಿಸಿದ ಬಿ.ಎಲ್.ಶಂಕರ್, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ರಾಜಧರ್ಮ ಪಾಲನೆ ಮಾಡು ವಂತೆ ಹಿಂದೊಮ್ಮೆ ಮೋದಿಗೆ ಸಲಹೆ ನೀಡಿದ್ದರು. ಅದನ್ನು ಈಗಲಾದರೂ ಪಾಲಿಸಲಿ ಎಂದು ಒತ್ತಾಯಿಸಿದರು.

ಕಾಂಗ್ರೆಸ್ ದ.ಕ. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕರಾದ ಜೆ.ಆರ್. ಲೋಬೊ, ಮೊಯ್ದಿನ್ ಬಾವ, ಶಕುಂತಳಾ ಶೆಟ್ಟಿ, ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹಿಂ, ಪಕ್ಷದ ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಕೆ.ಕೆ. ಶಾಹುಲ್ ಹಮೀದ್, ಬಿ.ಎಚ್. ಖಾದರ್, ಮಮತಾ ಗಟ್ಟಿ, ಸುರೇಶ್ ಬಲ್ಲಾಳ್ ಮತ್ತಿತರರಿದ್ದರು.

ಜನಜಾಗೃತಿ ಅವಶ್ಯ ಭವ್ಯಾ

ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರುದ್ಧ ಹೋರಾಟ ಮಾಡುವ ಜತೆಗೆ ಬಿಜೆಪಿ ಸರಕಾರದ ಆಡಳಿತ ವೈಫಲ್ಯ, ದೇಶದ ಜಿಡಿಪಿ ಕುಸಿತ, ನಿರುದ್ಯೋಗ, ಉದ್ಯೋಗ ಕಡಿತ ಮತ್ತಿತರ ವಿಷಯಗಳ ಬಗ್ಗೆ ಜನ ಜಾಗೃತಿ ಮೂಡಿಸಬೇಕಾಗಿದೆ. ಮೋದಿ ನೇತೃತ್ವದ ಸರಕಾರ ಬಂದ ಬಳಿಕ 4.50 ಕೋಟಿ ಜನ ಕೆಲಸ ಕಳೆದುಕೊಳ್ಳುವಂತಾಗಿದೆ. ವಿಮಾನ ನಿಲ್ದಾಣ, ಎಲ್‌ಐಸಿಗಳನ್ನು ಖಾಸಗೀಕರಣ ಮಾಡಿ ದೇಶವನ್ನು ಮಾರಲು ಹೊರಟಿದ್ದಾರೆ. ಈ ಬಗ್ಗೆಯೂ ಜನರಲ್ಲಿ ತಿಳುವಳಿಕೆ ಮೂಡಿಸಬೇಕಾಗಿದೆ ಎಂದು ಪ್ರಿಯದರ್ಶಿನಿ ಯುವ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಭವ್ಯಾ ನರಸಿಂಹ ಮೂರ್ತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News