×
Ad

ಒಮರ್ ಅಬ್ದುಲ್ಲಾ ವಿರುದ್ಧ ಹರಿಹಾಯಲು ಸಂಸತ್ತಿನಲ್ಲಿ 'ಫೇಕಿಂಗ್ ನ್ಯೂಸ್' ಲೇಖನದ ಹೇಳಿಕೆ ಉಲ್ಲೇಖಿಸಿದ ಪ್ರಧಾನಿ ಮೋದಿ

Update: 2020-02-07 12:24 IST

ಹೊಸದಿಲ್ಲಿ: ಗುರುವಾರ ಲೋಕಸಭೆಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಒಂದು ಗಂಟೆಗೂ ಅಧಿಕ  ಸಮಯ ಮಾಡಿದ ಭಾಷಣದಲ್ಲಿ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನಾಯಕ, ಸದ್ಯ ಸಾರ್ವಜನಿಕ ಸುರಕ್ಷತಾ ಕಾಯಿದೆಯನ್ವಯ ಬಂಧನದಲ್ಲಿರುವ ಒಮರ್ ಅಬ್ದುಲ್ಲಾ ಅವರು ಹಿಂದೆ ನೀಡಿದ್ದಾರೆನ್ನಲಾದ ಹೇಳಿಕೆಯೊಂದನ್ನು ಉಲ್ಲೇಖಿಸಿದ್ದರು. "370ನೇ ವಿಧಿ ರದ್ದತಿ ಭಾರೀ ಭೂಕಂಪನವನ್ನೇ ಸೃಷ್ಟಿಸಿ ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸುವುದು,'' ಎಂಬುದೇ ಆ ಹೇಳಿಕೆಯಾಗಿತ್ತು.

ಪ್ರಧಾನಿಯ ಭಾಷಣದ ಈ ನಿರ್ದಿಷ್ಟ ತುಣುಕನ್ನು ಬಿಜೆಪಿ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಕೂಡ ಪೋಸ್ಟ್ ಮಾಡಿದೆ.

ವಾಸ್ತವವೇನು? : ವಾಸ್ತವವಾಗಿ ವಿಡಂಬನಾತ್ಮಕ ವೆಬ್ ತಾಣ `ಫೇಕಿಂಗ್ ನ್ಯೂಸ್' ಇದರಲ್ಲಿ ಪ್ರಕಟವಾದ  ಲೇಖನವೊಂದರಲ್ಲಿದ್ದ ಓಮರ್ ಅಬ್ದುಲ್ಲಾ ಅವರ ಹೇಳಿಕೆಯನ್ನು ಸಂಸತ್ತಿನಲ್ಲಿ ಪ್ರಧಾನಿ ಉಲ್ಲೇಖಿಸಿದ್ದರು. ಫೇಕಿಂಗ್ ನ್ಯೂಸ್‍ನ ಈ ನಿರ್ದಿಷ್ಟ ಲೇಖನ ಮೇ 28, 2014ರಂದು ಪ್ರಕಟವಾಗಿತ್ತು.

ಈ ವಿಡಂಬನಾತ್ಮಕ ಲೇಖನ ಪ್ರಕಟಗೊಳ್ಳುವ ಮುನ್ನಾ ದಿನ  ಒಮರ್ ಅಬ್ದುಲ್ಲಾ ಅವರು 370ನೇ ವಿಧಿ  ಹಾಗೂ ಮೋದಿ ಸರಕಾರದ ಕುರಿತಂತೆ ಒಂದು ಟ್ವೀಟ್ ಪೋಸ್ಟ್ ಮಾಡಿದ್ದರು. 370ನೇ ವಿಧಿ ಅಸ್ತಿತ್ವದಲ್ಲಿಲ್ಲದೇ ಇದ್ದರೆ ಜಮ್ಮು ಕಾಶ್ಮೀರ ಭಾರತದ  ಭಾಗವಾಗಿ ಉಳಿಯುವುದಿಲ್ಲ ಎಂಬರ್ಥದ ಟ್ವೀಟ್ ಅನ್ನು ಅವರು ಪೋಸ್ಟ್ ಮಾಡಿದ್ದರು. ಆದರೆ ಅಲ್ಲಿ ಭೂಕಂಪನದ ಉಲ್ಲೇಖವಿರಲಿಲ್ಲ. ಈ ಶಬ್ದ ಫೇಕಿಂಗ್ ನ್ಯೂಸ್ ಲೇಖನದಲ್ಲಿ ಮಾತ್ರ ಕಾಣಿಸಿದೆ.

ಗೂಗಲ್ ಸರ್ಚ್ ಮಾಡಿದಾಗಲೂ ಮೋದಿ ಅವರು ಉಲ್ಲೇಖಿಸಿದ ಓಮರ್ ಅಬ್ದುಲ್ಲಾ ಅವರ ಹೇಳಿಕೆಯ 'ಭೂಕಂಪ' ಪದ ಇರುವ ವರದಿ ಎಲ್ಲೂ ಕಂಡು ಬರುವುದಿಲ್ಲ. ಟ್ವಿಟ್ಟರ್ ನಲ್ಲಿ  ಇದೇ ಪದವನ್ನು ಹಿಂದಿ ಹಾಗೂ ಇಂಗ್ಲಿಷಿನಲ್ಲಿ ಉಲ್ಲೇಖಿಸಿ ಮಾಡಿದ ಅಡ್ವಾನ್ಸ್ಡ್ ಸರ್ಚ್ ಕೂಡ ಕೇವಲ ಫೇಕಿಂಗ್ ನ್ಯೂಸ್ ಲೇಖನವನ್ನು ಮಾತ್ರ ತೋರಿಸುತ್ತದೆ.

ಆರು ವರ್ಷಗಳಷ್ಟು ಹಿಂದೆ ವಿಡಂಬನಾತ್ಮಕ ವೆನ್ ತಾಣವೊಂದರಲ್ಲಿ ಪ್ರಕಡವಾದ ಲೇಖನವೊಂದನ್ನು ಆಧರಿಸಿ ಹೇಳಿಕೆಯನ್ನು ಪ್ರಧಾನಿ ಸಂಸತ್ತಿನಲ್ಲಿ ಏಕೆ ಉಲ್ಲೇಖಿಸಿದರೆಂದು ತಿಳಿಯದಾಗಿದೆ.

ಅಷ್ಟಕ್ಕೂ ಒಮರ್ ಅಬ್ದುಲ್ಲಾ ಅವರ ಟ್ವಿಟ್ಟರ್ ಖಾತೆಯಿಂದ ಕಳೆದ ವರ್ಷದ ಆಗಸ್ಟ್ 5ರಂದು ಮಾಡಲಾದ ಎರಡು ಕೊನೆಯ ಟ್ವೀಟ್‍ಗಳಲ್ಲಿಯೂ ಅವರು "ರಾಜ್ಯಕ್ಕೆ ಏನು ಕಾದಿದೆಯೆಂದು ತಿಳಿದಿಲ್ಲ, ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ, ಶಾಂತಿ ಕಾಪಾಡಿ,'' ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News