ಸಿಎಎ ವಿರೋಧಿ ಫೋನ್ ಸಂಭಾಷಣೆ ಆಲಿಸಿ ಪ್ರಯಾಣಿಕನನ್ನು ಪೊಲೀಸ್ ಠಾಣೆಗೊಯ್ದ ಉಬರ್ ಚಾಲಕ!
ಮುಂಬೈ: ಪೌರತ್ವ ತಿದ್ದುಪಡಿ ಕಾಯಿದೆ ಪ್ರತಿಭಟನೆ ಕುರಿತಂತೆ ನಡೆಸುತ್ತಿದ್ದ ಫೋನ್ ಸಂಭಾಷಣೆ ಆಲಿಸಿದ ಮುಂಬೈಯ ಉಬರ್ ಕ್ಯಾಬ್ ಚಾಲಕನೊಬ್ಬ ಪ್ರಯಾಣಿಕರೊಬ್ಬರನ್ನು ನೇರವಾಗಿ ಪೊಲೀಸ್ ಠಾಣೆಗೆ ಕರೆದೊಯ್ದ ಘಟನೆ ನಡೆದಿದೆ.
ಈ ಆತಂಕಕಾರಿ ಘಟನೆ ಕುರಿತಂತೆ ಹೋರಾಟಗಾರ್ತಿ ಕವಿತಾ ಕೃಷ್ಣನ್ ಟ್ವೀಟ್ ಮಾಡಿದ್ದಾರಲ್ಲದೆ ಕ್ಯಾಬ್ ಚಾಲಕ ಠಾಣೆಗೆ ಕರೆದೊಯ್ದ ಪ್ರಯಾಣಿಕ ಲೇಖಕ, ಹೋರಾಟಗಾರ ಬಪ್ಪಾದಿತ್ಯ ಸರ್ಕಾರ್ ಆಗಿದ್ದರು ಎಂಬುದನ್ನೂ ಬಹಿರಂಗಪಡಿಸಿದ್ದಾರೆ.
ಸರ್ಕಾರ್ ಅವರು ಜುಹೂ ಪ್ರದೇಶದಿಂದ ಕುರ್ಲಾಗೆ ಬುಧವಾರ ರಾತ್ರಿ 10:30ರ ಸುಮಾರಿಗೆ ಉಬರ್ ಕ್ಯಾಬ್ ಮೂಲಕ ತೆರಳುತ್ತಿದ್ದರು. ಆಗ ತಮ್ಮ ಮೊಬೈಲ್ ಫೋನ್‍ನಲ್ಲಿ ಸ್ನೇಹಿತರೊಬ್ಬರ ಜತೆ ಮಾತನಾಡುತ್ತಾ ದಿಲ್ಲಿಯ ಶಾಹಿನ್ ಬಾಗ್ ಪ್ರತಿಭಟನೆಯಲ್ಲಿ `ಲಾಲ್ ಸಲಾಂ' ಘೋಷಣೆ ಕೆಲವರಿಗೆ ಇರಿಸುಮುರಿಸು ಉಂಟು ಮಾಡಿರುವ ಕುರಿತಂತೆ ಮಾತನಾಡಿದ್ದಾಗಿ ಸರ್ಕಾರ್ ಅವರು ನೀಡಿದ್ದ ಹೇಳಿಕೆಯನ್ನು ಕವಿತಾ ಕೃಷ್ಣನ್ ಟ್ವೀಟ್ ಮಾಡಿದ್ದಾರೆ.
ಈ ಸಂಭಾಷಣೆಯನ್ನು ಆಲಿಸುತ್ತಿದ್ದ ಉಬರ್ ಚಾಲಕ ಕ್ಯಾಬ್ ನಿಲ್ಲಿಸಿ ತನಗೆ ಎಟಿಎಂನಿಂದ ಹಣ ಪಡೆಯಲಿದೆ ಎಂದು ಹೋಗಿದ್ದು ನಂತರ ಇಬ್ಬರು ಪೊಲೀಸರೊಂದಿಗೆ ಆಗಮಿಸಿದ್ದ. ಪೊಲೀಸರು ಸರ್ಕಾರ್ ಅವರನ್ನು ಪ್ರಶ್ನಿಸಿ ಅವರ ವಿಳಾಸವನ್ನೂ ಕೇಳಿದಾಗ ಸರ್ಕಾರ್ ತಾವು ಜೈಪುರ್ ನವರು ಹಾಗೂ ಮುಂಬೈ ಬಾಘ್ ಸಿಎಎ ವಿರೋಧಿ ಪ್ರತಿಭಟನಾ ಸ್ಥಳಕ್ಕೆ ಆ ದಿನ ಭೇಟಿ ನೀಡಿದ್ದಾಗಿ ಹೇಳಿದ್ದರು.
ಕ್ಯಾಬ್ ನಲ್ಲಿರುವ ಪ್ರಯಾಣಿಕ ಕಮ್ಯುನಿಸ್ಟ್, ದೇಶ ಹೊತ್ತಿ ಉರಿಯುತ್ತಿರುವ ಬಗ್ಗೆ ಹಾಗೂ ಮುಂಬೈಯಲ್ಲಿ ಶಾಹಿನ್ ಬಾಗ್ ಮಾಡುವ ಕುರಿತಂತೆ ಮಾತನಾಡಿದ್ದ. ಹಾಗಾಗಿ ಆತನನ್ನು ಬಂಧಿಸಬೇಕು ಎಂದು ಉಬರ್ ಚಾಲಕ ಪೊಲೀಸರಲ್ಲಿ ಹೇಳಿದ್ದ. ಇಷ್ಟೇ ಅಲ್ಲದೆ ಸರ್ಕಾರ್ ಅವರ ಫೋನ್ ಸಂಭಾಷಣೆಯನ್ನು ರೆಕಾರ್ಡ್ ಮಾಡಿದ್ದಾಗಿಯೂ ಹೇಳಿದ್ದ.
``ನಾನು ನಿಮ್ಮನ್ನು ಠಾಣೆಗೆ ಕರೆದು ತಂದೆ ಬೇರೆಲ್ಲಿಗೋ ಕೊಂಡೊಯ್ದಿಲ್ಲದೇ ಇರುವುದಕ್ಕೆ ನೀವು ಧನ್ಯವಾದ ಹೇಳಬೇಕು'' ಎಂದೂ ಚಾಲಕ ಸರ್ಕಾರ್ ಅವರಲ್ಲಿ ಹೇಳಿದ್ದ ಎನ್ನಲಾಗಿದೆ.
ಇನ್ನು ಮುಂಧೆ ಕೆಂಪು ರುಮಾಲು ಕೊಂಡೊಯ್ಯದೇ ಇರುವಂತೆ ಪೊಲೀಸರು ಸರ್ಕಾರ್ ಅವರಿಗೆ ಸಲಹೆ ನೀಡಿದರಲ್ಲದೆ, ನಂತರ ಸರ್ಕಾರ್ ಅವರ ಸ್ನೇಹಿತ, ಹೋರಾಟಗಾರ ಎಸ್ ಗೋಹಿಲ್ ಠಾಣೆಗೆ ಬಂದ ನಂತರ ಅವರನ್ನು ಹೋಗಲುಬಿಟ್ಟರು.