ಕೇರಳ ಬಜೆಟ್ ನಲ್ಲಿ ಗಮನಸೆಳೆದ 'ಗಾಂಧೀಜಿಯವರ ಕೊನೆಯ ಕ್ಷಣಗಳು'

Update: 2020-02-07 11:01 GMT

ಕೊಚ್ಚಿ: ಕೇರಳ ಬಜೆಟ್ ಕಡತಗಳ ಮುಖಪುಟ ಪ್ರತಿ ವರ್ಷವೂ ಒಂದು ಭಿನ್ನ, ವಿಶೇಷ ಹಾಗೂ ಸ್ವಾರಸ್ಯಕರ ಫೋಟೋ ಹೊಂದಿರುತ್ತದೆ. ಈ ವರ್ಷ ಕೂಡ ಈ ಪದ್ಧತಿಗೆ ಹೊರತಾಗಿಲ್ಲ. ಈ ವರ್ಷದ ಬಜೆಟ್ ಅನ್ನು ಶುಕ್ರವಾರ ರಾಜ್ಯ ವಿತ್ತ ಸಚಿವ ಟಿ ಎಂ ಥಾಮಸ್ ಅಲ್ಲಿನ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.

ಈ 2020 ಬಜೆಟ್ ಕಡತಗಳ ಹೊರಪುಟದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಕೊನೆಯ ಕ್ಷಣಗಳ ಕಲಾವಿದ ಟಾಮ್ ವಟ್ಟಕುಳಿ ಅವರು ರಚಿಸಿದ ತೈಲವರ್ಣ ಕಲಾಕೃತಿಯ ಚಿತ್ರವಿದೆ. ಗಾಂಧೀಜಿಯನ್ನು ನಾಥೂರಾಂ ಗೋಡ್ಸೆ 1948ರಲ್ಲಿ  ಗುಂಡಿಕ್ಕಿ ಹತ್ಯೆಗೈದ ಕೆಲವೇ ಕ್ಷಣಗಳಲ್ಲಿ ನೆಲಕ್ಕುರುಳಿದ ಮಹಾತ್ಮ ಗಾಂಧಿ ಅವರ ರಕ್ತಸಿಕ್ತ ಮೈ ಹಾಗೂ ಅವರ ಸುತ್ತ ನೆರೆದಿದ್ದ ಜನರ ಮುಖಗಳಲ್ಲಿ ಮೂಡಿದ್ದ ಭೀತಿಯ ಚಿತ್ರಣ ಈ ಕಲಾಕೃತಿಯಲ್ಲಿದೆ.

ಇದೇ ಚಿತ್ರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಸಿಪಿಐ ನಾಯಕ ಕನ್ಹಯ್ಯಾ ಕುಮಾರ್ ಜನವರಿ 30ರಂದು ಹುತಾತ್ಮ ದಿನದಂದು ಶೇರ್ ಮಾಡಿದ್ದರು.

ಕಳೆದ ವರ್ಷದ ಬಜೆಟ್ ಕಡತಗಳ ಮುಖಪುಟದಲ್ಲಿ ಕಲಾವಿದೆ ಪಿ ಎಸ್ ಜಲಜಾ ಆವರ ಕಲಾಕೃತಿಯಿತ್ತು. ಸಮಾಜ ಸುಧಾರಕ ಅಯ್ಯಂಕಲಿ ಅವರು ಪಂಚಮಿ ಎಂಬ ಹೆಸರಿನ ದಲಿತ ಯುವತಿಯ ಜತೆಗಿರುವ ಚಿತ್ರ ಅದಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News