×
Ad

ಜೈಪುರ: ಕಾಶ್ಮೀರದ ಯುವಕನನ್ನು ಥಳಿಸಿ ಕೊಂದ ದುಷ್ಕರ್ಮಿಗಳು

Update: 2020-02-07 16:44 IST

ಶ್ರೀನಗರ: ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಕುನಾನ್ ಗ್ರಾಮದ ಯುವಕ ಬಾಸಿತ್ ಖಾನ್ ಎಂಬಾತನನ್ನು ಥಳಿಸಿ ಕೊಂದ ಘಟನೆ ರಾಜಸ್ಥಾನದ ರಾಜಧಾನಿ ಜೈಪುರ್ ನಲ್ಲಿ ನಡೆದಿದೆ.

ಈವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯೊಂದರ ಕ್ಯಾಟರಿಂಗ್ ವಿಭಾಗದಲ್ಲಿ ಖಾನ್ ಉದ್ಯೋಗದಲ್ಲಿದ್ದ. ಜೈಪುರ್ ನ ಹರ್ಮದ ಪ್ರದೇಶದಲ್ಲಿ ನಡೆದ ಪಾರ್ಟಿಯೊಂದರಿಂದ ಆತ ನಿರ್ಗಮಿಸಿದ ನಂತರ ಆರಂಭವಾದ ಜಗಳವೇ ಈ ಘಟನೆಗೆ ಕಾರಣವೆನ್ನಲಾಗಿದೆ.

ಜಗಳದ ನಂತರ ತೀವ್ರ ಹಲ್ಲೆಗೊಳಗಾಗಿದ್ದ ಖಾನ್ ರೈಲ್ವೆ ನಿಲ್ದಾಣದ ಸಮೀಪದ ತನ್ನ ಬಾಡಿಗೆ ಕೊಠಡಿಗೆ ಆಗಮಿಸುತ್ತಲೇ ವಾಂತಿ ಮಾಡಲು ಆರಂಭಿಸಿದ್ದ. ಆತನನ್ನು ಸವಾಯಿ ಮಾನ್ ಸಿಂಗ್ ಆಸ್ಪತ್ರೆಗೆ ದಾಖಲಿಸಿದಾಗ ಆತನಿಗೆ ಆಂತರಿಕ ಗಾಯಗಳಾಗಿವೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದರು. ಹಲ್ಲೆಯಿಂದಾಗಿ ಬಾಸಿತ್ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣ ಆತ ಕೋಮಾ ಸ್ಥಿತಿಗೆ ತಲುಪಿ ಗುರುವಾರ ರಾತ್ರಿ ಮೃತಪಟ್ಟಿದ್ದಾನೆ.

ಆತನ ತಂದೆ 2010ರಲ್ಲಿ ಮೃತಪಟ್ಟ ನಂತರ ಕುಟುಂಬದ ಏಕೈಕ ಆಧಾರವಾಗಿದ್ದ ಎಂದು ಬಾಸಿತ್ ಚಿಕ್ಕಪ್ಪ ಫಯಾಝ್ ಅಹ್ಮದ್ ಹೇಳಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಕಳೆದ ವರ್ಷದ ಆಗಸ್ಟ್ 2019ರಲ್ಲಿದ್ದ ನಿರ್ಬಂಧಗಳಿಂದಾಗಿ ಕೆಲಸವಿಲ್ಲದೆ ಕೊನೆಗೆ  ಉದ್ಯೋಗ ಅರಸಿಕೊಂಡು ಖಾನ್ ತನ್ನ ಚಿಕ್ಕಪ್ಪನೊಂದಿಗೆ ಜೈಪುರ್‍ ಗೆ ಬಂದಿದ್ದ.

ಘಟನೆ ಸಂಬಂಧ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News