×
Ad

ಪಚ್ಚನಾಡಿಯಲ್ಲಿ ಪ್ಲಾಸ್ಟಿಕ್ ರಿಸೈಕಲ್ ಘಟಕ: 100 ಟನ್ ಸಂಸ್ಕರಿಸಲ್ಪಟ್ಟ ಪ್ಲಾಸ್ಟಿಕ್ ನೆದರ್‌ಲ್ಯಾಂಡ್‌ಗೆ ರಫ್ತು

Update: 2020-02-07 17:23 IST

ಮಂಗಳೂರು, ಫೆ. 7: ನಗರದ ಪಚ್ಚನಾಡಿಯಲ್ಲಿ ಪ್ಲಾಸ್ಟಿಕ್ ಸಂಸ್ಕರಣಾ ಘಟಕ ಪ್ರಾಯೋಗಿಕವಾಗಿ ಕಾರ್ಯಾರಂಭಿಸಿದ್ದು, 100 ಟನ್ ಸಂಸ್ಕರಿಸಲ್ಪಟ್ಟ ಪ್ಲಾಸ್ಟಿಕ್ ಬಾಟಲ್ ಗಳು ನೆದರ್‌ಲ್ಯಾಂಡ್‌ಗೆ ರಫ್ತಾಗಿದೆ.

ನಗರದ ಪಚ್ಚನಾಡಿಯಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಪ್ಲಾಸ್ಟಿಕ್ ಮರುಬಳಕೆಯ ಸಂಸ್ಕರಣಾ ಘಟಕವನ್ನು ಸ್ಥಾಪಿಸಲಾಗಿದೆ. ನಗರದಿಂದ ದೊರೆಯುವ ತ್ಯಾಜ್ಯದಿಂದ ಪ್ರತಿದಿನ ಸುಮಾರು 28 ಟನ್‌ಗಳಷ್ಟು ಪ್ಲಾಸ್ಟಿಕ್ ಪ್ರತ್ಯೇಕಿಸಲಾಗುತ್ತದೆ.

ಇದನ್ನು ಕರಗಿಸಿ, ಪೆಲೆಟ್ ಅಥವಾ ಬೇಲ್ ರೂಪಕ್ಕೆ ತಂದು ಅದನ್ನು ಮರು ಬಳಕೆಗೆ ಕಳುಹಿಸಲಾಗುತ್ತದೆ. ಪೆಲೆಟ್ ರೂಪದ ಸಂಸ್ಕರಿಸಿದ ಪ್ಲಾಸ್ಟಿಕ್ ಗುಜರಾತ್‌ಗೆ ಕಳುಹಿಸಲಾಗುತ್ತಿದ್ದರೆ, ಬೇಲ್ ರೂಪದ ಪ್ಲಾಸ್ಟಿಕನ್ನು ಪ್ರಥಮವಾಗಿ ನೆದರ್‌ಲ್ಯಾಂಡ್‌ಗೆ ಕಂಟೇನರ್ ಮೂಲಕ ಹಡಗಿನಲ್ಲಿ ಕಳುಹಿಸಲಾಗಿದೆ. ಪಚ್ಚನಾಡಿಯಲ್ಲಿ ಪ್ಲಾಸ್ಟಿಕ್‌ನಲ್ಲಿರುವ ಧೂಳು ಸಹಿತ ತ್ಯಾಜ್ಯವನ್ನು ಪ್ರತ್ಯೇಕಿಸುವ ಯಂತ್ರವೂ ಇದೆ.

ತ್ಯಾಜ್ಯ ನಿರ್ವಹಣೆಯಲ್ಲಿ ಪ್ಲಾಸ್ಟಿಕ್‌ನದ್ದು ಬಹುದೊಡ್ಡ ಸಮಸ್ಯೆಯಾಗಿದ್ದು, ಇದೀಗ ಇದಕ್ಕೆ ದೊಡ್ಡ ಪ್ರಮಾಣದಲ್ಲಿ ಮುಕ್ತಿ ದೊರಕಿದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಪರಿಸರ ಅಭಿಯಂತರ ಮಧ ಮನೋಹರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News