×
Ad

ಮಸೀದಿ ಎದುರು ಜೈಕಾರ ಹಾಕುವುದು ಹಿಂದುತ್ವ ಅಲ್ಲ : ಮಹೇಂದ್ರ ಕುಮಾರ್

Update: 2020-02-07 20:41 IST

ಮಂಗಳೂರು, ಫೆ.7: ಮೈತುಂಬ ಕೇಸರಿ ಶಾಲು ಹೊದ್ದುಕೊಂಡು ಮುಸ್ಲಿಮರನ್ನು ಟೀಕಿಸುವುದು, ಮಸೀದಿಯ ಎದುರು ಜೈಕಾರ ಹಾಕುವುದು ಹಿಂದುತ್ವ ಅಲ್ಲ ಎಂದು ಬಜರಂಗದಳದ ಮಾಜಿ ಸಂಚಾಲಕ, ಚಿಂತಕ ಮಹೇಂದ್ರ ಕುಮಾರ್ ಆರೆಸ್ಸೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕಾಟಿಪಳ್ಳದಲ್ಲಿ ಶುಕ್ರವಾರ ನಡೆದ ಪೌರತ್ವ ತಿದ್ದುಪಡಿ ವಿರುದ್ಧದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮುಸ್ಲಿಮರನ್ನು ತೋರಿಸಿ ಹಿಂದುಳಿದ ವರ್ಗದ ಮಕ್ಕಳು, ಯುವಕರನ್ನು ಆರೆಸ್ಸೆಸ್‌ನವರು ಬಲಿ ಪಡೆಯುತ್ತಿದ್ದಾರೆ. ಇವರದ್ದು ಅವಕಾಶವಾದಿ ರಾಷ್ಟ್ರೀಯತೆ, ಅವಕಾಶವಾದಿ ಹಿಂದುತ್ವ ಆಗಿದೆ ಎಂದು ಟೀಕಿಸಿದರು.

ಸಿಂಧ್‌ನಲ್ಲಿ ಭಯೋತ್ಪಾದನೆ ನಡೆದರೆ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತವೆ. ಇಲ್ಲಿಯ ಮುಸ್ಲಿಮರಿಗೂ ಪಾಕಿಸ್ತಾನಕ್ಕೂ, ಎಲ್ಲಿಯೋ ನಡೆಯುವ ಭಯೋತ್ಪಾದನೆಗೂ, ಕಾಟಿಪಳ್ಳದ ಮುಸ್ಲಿಮರಿಗೂ ಯಾವುದೇ ರೀತಿಯ ಸಂಬಂಧವೂ ಇಲ್ಲ. ಶಾಹಿನ್‌ಭಾಗ್‌ನಲ್ಲಿ ಗಲಭೆ ಎಬ್ಬಿಸಲು ಪ್ರತಿಭಟನಾಕಾರರ ಮಧ್ಯೆ ತಮ್ಮದೇ ಹುಡುಗಿಯನ್ನು ಬುರ್ಖಾ ಹಾಕಿ ಕಳುಹಿಸಿ ಪಾಕಿಸ್ತಾನಕ್ಕೆ ಜೈಕಾರ ಹಾಕಿಸುವುದಾದರೆ ಇವರು ಭವಿಷ್ಯದಲ್ಲಿ ಭಾರತವನ್ನು ತಾಲಿಬಾನ್ ಮಾಡುವ ಮನಸ್ಥಿತಿ ಹೊಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರೆಸ್ಸೆಸ್‌ನ ಭಗವಾಧ್ವಜ ಹಿಡಿದುಕೊಂಡು ಇಂದಿರಾಗಾಂಧಿಯನ್ನು ಬೈಯುವವರು ಬದುಕುತ್ತಿರುವುದೇ ಇಂದಿರಾ ಗಾಂಧಿ ಕೊಟ್ಟ ಜಮೀನಿನಲ್ಲಾಗಿದೆ. ಎಲ್ಲರನ್ನೂ ಟೀಕಿಸುವ ನೀವು ದೇಶದ್ರೋಹಿಗಳಾಗಿದ್ದರೆ ನಾವು ದೇಶಪ್ರೇಮಿಗಳಾಗಿದ್ದೇವೆ. ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ರೂಪಿಸಲಾಗುತ್ತಿದ್ದು, ಅದು ಯಾವ ಮಟ್ಟಕ್ಕಾದರೂ ಸೈ ಎಂದು ಸವಾಲು ಹಾಕಿದರು.

ಎನ್‌ಆರ್‌ಸಿ-ಸಿಎಎ ಎನ್ನುವುದು ಅವಳಿ-ಜವಳಿ ಮಸೂದೆಗಳು. ಅದಕ್ಕೆ ಯಾವುದೇ ರೀತಿಯ ಗೌರವವನ್ನೂ ಕೊಡಬೇಕಾಗಿಲ್ಲ. ಪಾಕಿಸ್ತಾನ, ಬಾಂಗ್ಲಾದೇಶದ ಮುಸ್ಲಿಮರಿಗೆ ಪೌರತ್ವ ಕೊಡುವುದೇ ಬೇಡ. ಇತರರಿಗೆ ಪೌರತ್ವ ಕೊಡುತ್ತಿರುವುದಕ್ಕೆ ನಾವು ಬೊಬ್ಬೆ ಹಾಕುತ್ತಿಲ್ಲ. ಆದರೆ ಎನ್‌ಆರ್‌ಸಿ ತಂದು ದೇಶದ ಹಿಂದೂಗಳನ್ನೂ ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಮಾಡಲು ಹೊರಟಿರುವುದಕ್ಕಾಗಿ ನಾವು ಬೊಬ್ಬೆ ಹಾಕುತ್ತಿದ್ದು, ಇಂದು ಕೇಸರಿ ಶಾಲು ಹಾಕಿಕೊಂಡು ಟೀಕಿಸುವವರಿಗೆ ಇದು ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮುಸ್ಲಿಮರ ತಲೆಯಲ್ಲಿ ಎನ್‌ಆರ್‌ಸಿ-ಸಿಎಎ ಬಗ್ಗೆ ಭಯ ಹುಟ್ಟಿಸಿ ತಲೆ ಕೆಡಿಸುವುದು ಆರೆಸ್ಸೆಸ್-ಬಿಜೆಪಿಯ ಉದ್ದೇಶವಾಗಿದೆ. ಈ ನೆಲವನ್ನು ಕಾಪಾಡಿಕೊಳ್ಳಬೇಕೆಂದರೆ ನಾವೆಲ್ಲರೂ ಹೋರಾಟಕ್ಕೆ ಇಳಿಯಬೇಕು. ದೇಶವನ್ನು ಯಾವ ರೀತಿ ನಿಭಾಯಿಸಬೇಕು ಎನ್ನುವ ನೆಲೆಯಲ್ಲಿ ಸಾರ್ವಜನಿಕ ಸಭೆಗಳಿಗಿಂತ ನಾಲ್ಕು ಗೋಡೆಯ ಮಧ್ಯೆ ಕೂತು ಚರ್ಚಿಸಬೇಕಿದೆ ಎಂದು ಕರೆ ನೀಡಿದರು.

ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಮಾತನಾಡಿ, ಮಂಗಳೂರಿನಲ್ಲಿ ನಡೆದ ಗೋಲಿಬಾರ್‌ನಲ್ಲಿ ಮೃತಪಟ್ಟ ಕುಟುಂಬಕ್ಕೆ ಘೋಷಿಸಲಾದ ಹತ್ತು ಲಕ್ಷ ಪರಿಹಾರ ಧನವನ್ನು ರಾಜ್ಯ ಸರಕಾರ ಹಿಂದಕ್ಕೆ ಪಡೆದಿರುವುದಕ್ಕೆ ಬೇಸರವಿಲ್ಲ. ಅದರೆ ಆ ಹಣವನ್ನು ನೀವು ವಿಮಾನ ನಿಲ್ದಾಣಕ್ಕೆ ಬಾಂಬ್ ಇಡಲು ಮುಂದಾಗುವಂತಹ ಹೈಟೆಕ್ ಮಾನಸಿಕ ರೋಗಿಗಳ ಚಿಕಿತ್ಸೆಗೆ ಬಳಕೆ ಮಾಡಬೇಕು ಎಂದು ವ್ಯಂಗ್ಯವಾಡಿದರು.

ಸಿಪಿಐಎಂ ಮುಖಂಡ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ದೇಶ ಪ್ರೇಮದ ಬಗ್ಗೆ ಮಾತನಾಡುವ ಆರೆಸ್ಸೆಸ್‌ನವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಒಬ್ಬನೇ ಒಬ್ಬ ಮುಖಂಡನ ಹೆಸರನ್ನು ನೀಡಲಿ. ಮಾತೆತ್ತಿದರೆ ವೀರ ಸಾವರ್ಕರ್ ಎನ್ನುತ್ತಾರೆ. ಆದರೆ ಆತ ದೇಶದ ದಾಖಲೆ ಗಳನ್ನು ಬ್ರಿಟಿಷರಿಗೆ ಕೊಟ್ಟು ಕ್ಷಮಾಪಣಾ ಪತ್ರ ಬರೆದಿದ್ದ ಹೇಡಿ ಎಂದು ಆಕ್ರೋಶ ಹೊರಹಾಕಿದರು.

ಹಿಂದೂ ರಾಷ್ಟ್ರ ಎನ್ನುವ ನೀವು ನಾರಾಯಣ ಗುರು, ಸ್ವಾಮಿ ವಿವೇಕಾನಂದರು, ಗಾಂಧೀಜಿ, ಅಂಬೇಡ್ಕರ್ ಅವರ ಹಿಂದೂ ರಾಷ್ಟ್ರ ಕಟ್ಟುವುದಕ್ಕೆ ನಮ್ಮ ಬೆಂಬಲ ಇದೆ. ಮನುವಾದಿ ಸಿದ್ಧಾಂತದ ಹಿಂದೂ ರಾಷ್ಟ್ರ ಕಟ್ಟಲು ನಾವು ಜೀವಂತ ಇರುವವರೆಗೆ ಬಿಡುವುದಿಲ್ಲ, ನಿಮಗೆ ಕಟ್ಟಲೂ ಸಾಧ್ಯವೂ ಇಲ್ಲ ಎಂದು ಎಚ್ಚರಿಸಿದರು.

ಪ್ರತಿಭಟನಾ ಸಮಾವೇಶದಲ್ಲಿ ಪಿಎಫ್‌ಐ ಜಿಲ್ಲಾಧ್ಯಕ್ಷ ಎ.ಕೆ.ಅಶ್ರಫ್, ಅಬ್ದುಲ್ ನಾಸಿರ್ ಮದನಿ ಇನ್ನಿತರರು ಉಪಸ್ಥಿತರಿದ್ದರು.

ಕಾಯ್ದೆ ರೂಪಿಸಿದವರು ಮೂರ್ಖ ಶಿಖಾಮಣಿಗಳು: ಸುಧೀರ್

ಮಂಗಳೂರಿನಲ್ಲಿ ಇಬ್ಬರನ್ನು ಕೊಂದು ವೀರ-ಶೂರ ಎಂದು ಕರೆಸಿಕೊಂಡ ಕಮಿಷನರ್ ಹರ್ಷ, ಮಠಾಧಿಪತಿಗಳ ಸಹಿತ ಪ್ರತಿಯೊಬ್ಬರೂ ತಾವು ಭಾರತೀಯರು ಎನ್ನುವ ದಾಖಲೆಗಳನ್ನು ತೋರಿಸಬೇಕಾಗುತ್ತದೆ. ಈ ಕಾಯ್ದೆಯನ್ನು ಬಿಜೆಪಿಯ ಮೂರ್ಖ ಶಿಖಾಮಣಿಗಳು ಹೊಡೆದಾಡಲೆಂದೇ ರೂಪಿಸಿದ್ದಾರೆ ಎಂದು ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ ಹರಿಹಾಯ್ದರು.

ಮಾತಿನ ಮೂಲಕ ಪ್ರತಿಭಟನಾಕಾರರು ಬಗ್ಗದಿದ್ದರೆ ಬಂದೂಕಿನ ಮೂಲಕ ಉತ್ತರ ನೀಡುತ್ತೇವೆ ಎನ್ನುವ, ಸಂವಿಧಾನವನ್ನು ಕಿತ್ತು ತಿನ್ನುವ ಆದಿತ್ಯನಾಥ ಯೋಗಿಯಲ್ಲ, ರೋಗಿ. ದೇಶದಲ್ಲಿ ಅತಿಹೆಚ್ಚು ಶಿಶು ಮರಣ ಪ್ರಮಾಣ, ಅತ್ಯಾಚಾರಕ್ಕೆ ಉತ್ತರ ಪ್ರದೇಶ ರಾಜ್ಯ ಸಾಕ್ಷಿಯಾಗುತ್ತಿ ದ್ದರೂ ಅಲ್ಲಿನ ಮುಖ್ಯಮಂತ್ರಿಯನ್ನು ನಾವು ಯೋಗಿ ಎನ್ನುತ್ತೇವೆ. ನಮಗೆ ಏನಿದ್ದರೂ ಪುರಂರದ ದಾಸ, ಸ್ವಾಮಿ ವಿವೇಕಾನಂದ, ಸಂತ ಶಿಶುನಾಳ ಶರೀಫರಂತಹ ಯೋಗಿ ಪರಂಪರೆಯ ಇದ್ದು ಇವರ ಮುಂದೆ ಆದಿತ್ಯನಾಥ ಯಾರು ಎಂದು ಸುಧೀರ್ ಕುಮಾರ್ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News