‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ’ ಇದು ದಕ್ಷಿಣ ಭಾರತಕ್ಕೆ ಸಂದ ಗೌರವ: ಪೇಜಾವರಶ್ರೀ
ಉಡುಪಿ, ಫೆ.7: ಕೇಂದ್ರ ಸರಕಾರ ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿರುವ ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ’ ಟ್ರಸ್ಟ್‌ನ ಓರ್ವ ಟ್ರಸ್ಟಿಯಾಗಿ ತಮ್ಮನ್ನು ನೇಮಿಸಿರುವುದು ದಕ್ಷಿಣ ಭಾರತಕ್ಕೇ ಸಂದ ಗೌರವ ಎಂದು ಪೇಜಾವರ ಮಠದ ಶ್ರೀವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿಯ ರಥಬೀದಿಯಲ್ಲಿರುವ ಪೇಜಾವರ ಮಠದಲ್ಲಿ ಇದೇ ಮೊದಲ ಬಾರಿ ಈ ಕುರಿತು ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, ದಕ್ಷಿಣ ಭಾರತ ದಲ್ಲಿಯೇ ಒಬ್ಬರಿಗೆ ಈ ಅವಕಾಶ ಒದಗಿ ಬಂದಿದೆ. ಆ ವ್ಯಕ್ತಿ ನಾನಾಗಿರುವುದಕ್ಕೆ ಸಂತೋಷ ವಾಗುತ್ತಿದೆ. ಇದು ಗುರುಗಳ ಸೇವೆಗೆ ಸಂದ ಗೌರವ.’ ಎಂದು ಶ್ರೀವಿಶ್ವಪ್ರಸನ್ನ ತೀರ್ಥರು ತಮ್ಮ ಗುರುಗಳಾದ ಶ್ರೀವಿಶ್ವೇಶತೀರ್ಥರನ್ನು ಸ್ಮರಿಸಿದರು.
ಇದು ನನಗೆ ದೊರೆತ ಗೌರವಕ್ಕಿಂತ ಹೆಚ್ಚಾಗಿ ತುಂಬಾ ದೊಡ್ಡ ಜವಾಬ್ದಾರಿ ಯಾಗಿದೆ ಎಂದ ಶ್ರೀಗಳು, ಈ ಜವಾಬ್ದಾರಿ ನಿರ್ವಹಿಸಲು ಸಮಾಜದ ಎಲ್ಲರ ಸಹಕಾರಬೇಕು. ವಿಶ್ವಸ್ಥನಾಗಲು ಒಪ್ಪಿಗೆ ನೀಡಿ ಸ್ವೀಕೃತಿ ಪತ್ರ ಕಳುಹಿಸಿದ್ದೇನೆ. ರಾಮಮಂದಿರದ ಕಾರ್ಯ ಯೋಜನೆಗಳು ಮುಂದಿನ ಸಭೆಯಲ್ಲಿ ನಿರ್ಣಯವಾಗಲಿವೆ ಎಂದರು.
ಈ ಬಹು ದೊಡ್ಡ ಜವಾಬ್ದಾರಿಯನ್ನು ನಿರ್ವಹಣೆ ಮಾಡಲು ಒಬ್ಬನಿಂದ ಸಾಧ್ಯವಿಲ್ಲ. ಅದಕ್ಕೆ ಎಲ್ಲರ ಬೆಂಬಲ ಸಹಕಾರ ಅಗತ್ಯವಾಗಿ ಬೇಕು. ಸದಸ್ಯನಾಗಿ ನೇಮಕಗೊಂಡ ನನ್ನನ್ನು ಗೌರವಿಸುವ ಬದಲು ಈ ಕುರಿತು ಕಾಲಕಾಲಕ್ಕೆ ಸಲಹೆಗಳನ್ನು ನೀಡುವ ಕೆಲಸ ಮಾಡಬೇಕು. ನಾನು ಇಲ್ಲಿ ನಿಮ್ಮೆಲ್ಲರ ಪ್ರತಿನಿಧಿಯಾಗಿದ್ದೇನೆ. ಜಗತ್ತಿನ ಆಶಾಕಿರಣ ಆಗಿರುವ ರಾಮಮಂದಿರ ಆದಷ್ಟು ಬೇಗ ನಿರ್ಮಾಣವಾಗಬೇಕೆಂಬುದು ಎಲ್ಲರ ಆಶಯ ವಾಗಿದೆ ಎಂದವರು ನುಡಿದರು.