ಆರೆಸ್ಸೆಸ್, ಬಿಜೆಪಿ ವಿರುದ್ಧ ಟೀಕೆಗಿಂತ ಹೆಚ್ಚು ಜಾಗೃತಿ ಮೂಡಿಸಿ : ಮಹೇಂದ್ರ ಕುಮಾರ್
ಬಂಟ್ವಾಳ : ಪಾಕಿಸ್ತಾನ ಮತ್ತು ಮುಸ್ಲಿಮರನ್ನು ದ್ವೇಷಿಸುವುದೇ ದೇಶಭಕ್ತಿ ಎಂದು ಆರೆಸ್ಸೆಸ್ ಮತ್ತು ಬಿಜೆಪಿಯವರು ನಂಬಿದ್ದಾರೆ. ಅದೇ ರೀತಿ ಆರೆಸ್ಸೆಸ್ ಮತ್ತು ಬಿಜೆಪಿಯನ್ನು ಟೀಕೆ ಮಾಡುವುದೇ ನಮ್ಮ ದೇಶಭಕ್ತಿ ಎಂಬ ತಪ್ಪು ಕಲ್ಪನೆ ಕೆಲವರಲ್ಲಿ ಬೆಳೆಯುತ್ತಿದೆ. ಇದು ಸರಿಯಾದ ಕಲ್ಪನೆ ಅಲ್ಲ. ಆರೆಸ್ಸೆಸ್, ಬಿಜೆಪಿ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಿ ಸಮೃದ್ಧ, ಸಾಮರಸ್ಯ, ಭಾವೈಕ್ಯದ ಬಲಿಷ್ಠ ಭಾರತವನ್ನು ಕಟ್ಟುವುದೇ ನಿಜವಾದ ದೇಶಭಕ್ತಿಯಾಗಿದೆ ಎಂದು ಚಿಂತಕ ಮಹೇಂದ್ರ ಕುಮಾರ್ ಅಭಿಪ್ರಾಯಪಟ್ಟರು.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್‍ಸಿ), ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‍ಪಿಆರ್)ಯನ್ನು ವಿರೋಧಿಸಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಸಮಿತಿ ಫರಂಗಿಪೇಟೆ ವತಿಯಿಂದ ಶುಕ್ರವಾರ ಫರಂಗಿಪೇಟೆಯ ಸುಲ್ತಾನ್ ಮೈದಾನದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಮ್ಮ ಹೋರಾಟ, ಚಳವಳಿ ಸಿಎಎ, ಎನ್‍ಆರ್‍ಸಿ, ಎನ್‍ಪಿಆರ್‍ಗೆ ಮಾತ್ರ ಸೀಮಿತವಾಗಿರಬಾರದು. ಯಾರೋ ಒಂದಿಬ್ಬರು ರಚಿಸಿರುವ ಈ ಕಾಯ್ದೆಗಳು ಜಾರಿಯಾಗಲ್ಲ. ಜಾರಿ ಮಾಡಲೂ ಈ ದೇಶದ ಜನರು ಬಿಡುವುದೂ ಇಲ್ಲ. ಇಂದು ಈ ದೇಶದ ಆಡಳಿತ ದೇಶವನ್ನು ಪ್ರೀತಿ ಮಾಡದ, ದೇಶದ ಆಸ್ತಿಯನ್ನು ಕಿತ್ತು ಖಾಸಗಿಯವರಿಗೆ ಹಂಚುತ್ತಿರುವ, ದೇಶವನ್ನು ಧರ್ಮಗಳ ಆಧಾರದಲ್ಲಿ ಛಿದ್ರ ಮಾಡುವ ಮನಸ್ಥಿತಿಯ ದುಷ್ಟ ಶಕ್ತಿಗಳ ಕೈಗೆ ಹೋಗಿದೆ. ಇದಕ್ಕೆ ಯಾರು ಕಾರಣರು ಎಂಬುದನ್ನು ನಾವೆಲ್ಲರೂ ಅವಲೋಕನ ಮಾಡಬೇಕು. ಹಾಗಾಗಿ ಆವೇಶಭರಿತ ಭಾಷಣಗಳ ಮೂಲಕ ಜನರ ಭಾವನೆಗಳನ್ನು ಕದಡುವ ಕೆಲಸ ನಮ್ಮದಾಗದೆ ಆರೆಸ್ಸೆಸ್ ಮತ್ತು ಬಿಜೆಪಿಯ ಷಡ್ಯಂತರಗಳನ್ನು ಜನರಿಗೆ ತಿಳಿಸುವ ಕೆಲಸ ನಮ್ಮದಾಗಬೇಕು. ಆ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸಗಳು ಹೆಚ್ಚು ನಡೆಯಬೇಕು ಎಂದು ಅವರು ಹೇಳಿದರು.
ದೇಶದ ಆಡಳಿತವನ್ನು ತನ್ನಲ್ಲಿ ಶಾಶ್ವತವಾಗಿ ಉಳಿಸಿಕೊಳ್ಳಲು ಬಿಜೆಪಿ ಮತ್ತು ಆರೆಸ್ಸೆಸ್ ಹಿಂದೂ ಮುಸ್ಲಿಮರ ಮಧ್ಯೆ ಕಂದಕವನ್ನು ನಿರ್ಮಾಣ ಮಾಡುತ್ತಿವೆ. ಈ ಕೆಲಸಕ್ಕಾಗಿ ಹಿಂದುಳಿದ ಜಾತಿಗಳ ಅಮಾಯಕ ಯುವಕರನ್ನು ಬಳಸಿಕೊಳ್ಳಲಾಗುತ್ತಿವೆ. ಇದರ ವಿರುದ್ಧ ನಾವು ವೇದಿಕೆಯಲ್ಲಿ ನಿಂತು ಆರೆಸ್ಸೆಸ್ ಮತ್ತು ಬಿಜೆಪಿಯ ವಿರುದ್ಧ ಆವೇಶಭರಿತ ಭಾಷಣ, ಟೀಕೆ ಮಾಡಿದಾಗ ಅದನ್ನೂ ಹಿಂದೂ ಧರ್ಮ ಮತ್ತು ದೇಶದ ವಿರುದ್ಧ ಟೀಕೆ ಮಾಡಲಾಗುತ್ತಿದೆ ಎಂದು ಬಿಂಬಿಸಲಾಗುತ್ತಿದೆ. ಆ ಮೂಲಕ ಇನ್ನಷ್ಟು ಯುವಕರನ್ನು ತಮ್ಮ ಪರ ಕಟ್ಟಿಕೊಳ್ಳಲು ಬಿಜೆಪಿ, ಆರೆಸ್ಸೆಸ್‍ಗೆ ಸಹಕಾರಿ ಯಾಗುತ್ತಿದೆ. ಹಾಗಾಗಿ ಬಿಜೆಪಿ, ಆರೆಸ್ಸೆಸ್ ಷಡ್ಯಂತರಕ್ಕೆ ಬಲಿಯಾಗುತ್ತಿರುವ ಅಮಾಯಕ ಯುವಕರಲ್ಲಿ ಜಾಗೃತಿ ಮೂಡಿಸುವ ಕೆಲಸಗಳನ್ನು ನಾವು ಮಾಡಬೇಕಿದೆ ಎಂದು ಅವರು ತಿಳಿಸಿದರು.
ಚಿಂತಕಿ ಭವ್ಯ ನರಸಿಂಹಮೂರ್ತಿ, ವಿದ್ಯಾರ್ಥಿ ನಾಯಕಿ ಅಮೂಲ್ಯ, ಮಂಗಳೂರು ದಾವ ಸೆಂಟರ್ ಕಾರ್ಯದರ್ಶಿ ಎಂ.ಜಿ.ಮುಹಮ್ಮದ್, ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಯಾಕೂಬ್ ಸಅದಿ, ಎಸ್‍ಡಿಪಿಐ ರಾಜ್ಯ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ, ಎಸ್ಕೆಎಸ್ಸೆಸ್ಸೆಫ್ ಕ್ಯಾಂಪಸ್ ವಿಂಗ್ ರಾಜ್ಯಾಧ್ಯಕ್ಷ ಇಬ್ರಾಹೀಂ ಬಾತಿಷ್, ಮಾತನಾಡಿದರು. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಸಮಿತಿಯ ಅಧ್ಯಕ್ಷ ಮುಹಮ್ಮದ್ ಬಾವ ಅಧ್ಯಕ್ಷತೆ ವಹಿಸಿದ್ದರು. ಇರ್ಷಾದ್ ದಾರಿಮಿ ಮಿತ್ತಬೈಲ್ ಉಪಸ್ಥಿತರಿದ್ದರು.
ಫರಂಗಿಪೇಟೆ ಜುಮಾ ಮಸೀದಿ ಖತೀಬ್ ಅಬ್ಬಾಸ್ ದಾರಿಮಿ ದುಅ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿರು. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟ ಸಮಿತಿಯ ಉಪಾಧ್ಯಕ್ಷ ಉಮರ್ ಫಾರೂಕ್ ಸ್ವಾಗತಿಸಿದರು. ನ್ಯಾಯವಾದಿ ಮುಹಮ್ಮದ್ ಗಝಾಲಿ ಕಾರ್ಯಕ್ರಮ ನಿರೂಪಿಸಿದರು. ಪಿ.ಎಂ.ಮುಹಮ್ಮದ್ ವಂದಿಸಿದರು.
ಯಾವುದೇ ಪ್ರಚೋಧನಕಾರಿ ಭಾಷಣ ಮಾಡದ ನನ್ನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ಆದರೆ ನಿರಂತರ ಪ್ರಚೋದನಕಾರಿ ಭಾಷಣ ಮಾಡುವ ಬಿಜೆಪಿ ನಾಯಕರ ವಿರುದ್ಧ ಯಾವುದೇ ಪ್ರಕರಣ ದಾಖಲಾಗುತ್ತಿಲ್ಲ. ಸಂವಿಧಾನ ವಿರೋಧಿ ಕಾಯ್ದೆಯ ವಿರುದ್ಧ ನಾಟಕ ಮಾಡಿದ ಬೀದರ್ ಶಾಹಿನ್ ಶಾಲೆ, ಅಲ್ಲಿನ ವಿದ್ಯಾರ್ಥಿಗಳು, ಪೋಷಕರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದ ಪೊಲೀಸರು ಬಾಬರಿ ಮಸೀದಿಯ ದ್ವಂಸವನ್ನು ಮರು ಸೃಷ್ಟಿ ಮಾಡಿ ಪ್ರಚೋದನೆ ಮಾಡಿದ ಕಲ್ಲಡ್ಕ ಶಾಲೆಯ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ. ಇದು ಕಾನೂನಿನ ದುರ್ಬಳಕೆಯಾಗಿದೆ. ಪೊಲೀಸ್ ಇಲಾಖೆ ಯಾರದ್ದೋ ಒತ್ತಡಕ್ಕೆ ಒಳಗಾಗಿ ಕೆಲಸ ಮಾಡಬಾರದು ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜೈಶಾ ಉತ್ತಮ ಉದ್ಯಮ ಮಾಡಿ ಕೋಟ್ಯಂತರ ರೂ. ಸಂಪಾದನೆ ಮಾಡುತ್ತಿದ್ದಾರೆ. ಒಂದು ದಿನವೂ ಕ್ರಿಕೆಟ್ ಆಡದಿದ್ದರೂ ಅವರು ಬಿಸಿಸಿಗೆ ಆಯ್ಕೆ ಆಗುತ್ತಾರೆ. ಆದರೆ ಅಮಿತ್ ಶಾ ಅವರ ಭಾಷಣವನ್ನು ಕೇಳಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುವವರ ಮೇಲೆ ಪೊಲೀಸರು ಗುಂಡಿನ ದಾಳಿ ಮಾಡಿ, ಯುವಕರು ಜೈಲು ಸೇರಿದ್ದಾರೆ. ಅವರ ಮತ್ತು ಅವರ ಕುಟುಂಬದ ಸ್ಥಿತಿ ಅತಂತ್ರವಾಗಿದೆ. ಆರೆಸ್ಸೆಸ್ ಮತ್ತು ಬಿಜೆಪಿಯವರ ಭಾಷಣಕ್ಕೆ ದಾರಿ ತಪ್ಪುತ್ತಿರುವ ಹಿಂದುಳಿದ ವರ್ಗಗಳ ಯುವಕರು ಇದನ್ನು ಅರ್ಥ ಮಾಡಿಕೊಳ್ಳಬೇಕು.
- ಭವ್ಯ ನರಸಿಂಹ ಮೂರ್ತಿ