ಸಿ.ಎ.ಎ ಪರವಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ -ಡಾ.ಅಶ್ವತ್ ನಾರಾಯಣ
ಮಂಗಳೂರು, ಫೆ .7: ಸಿಎ.ಎ ಪರವಾಗಿ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ತಿಳುವಳಿಕೆ ಮೂಡಿಸುವ ಕೆಲಸ ಆಗಬೇಕಾಗಿದೆ. ಸಿಎಎ ಪರವಾಗಿ ಎಬಿವಿಪಿ ಸಾಕಷ್ಟು ಕೆಲಸ ಮಾಡಿದೆ ಇನ್ನೂ ಮುಂದೆಯೂ ಈ ಕಾರ್ಯದಲ್ಲಿ ಮುಂದುವರಿಯಬೇಕು. ಈ ನಿಟ್ಟಿನಲ್ಲಿ ನಮ್ಮ ಬೆಂಬಲವಿದೆ ಎಂದು ರಾಜ್ಯದ ಉಪ ಮುಖ್ಯ ಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ ನಾರಾಯಣ ಸಿ.ಎನ್ ತಿಳಿಸಿದ್ದಾರೆ.
ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ರಾಜ್ಯ ಸಮಿತಿಯ ವತಿಯಿಂದ ಮೂರು ದಿನಗಳ ಕಾಲ ಹಮ್ಮಿಕೊಂಡ 39ನೆ ಎಬಿವಿಪಿ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಿಎಎ ವಿಚಾರದಲ್ಲಿ ಕೆಲವು ವ್ಯಕ್ತಿಗಳು , ಕೆಲವು ಸಂಘಟನೆಗಳು ಸ್ಪಷ್ಟ ಚಿಂತನೆಯಿಲ್ಲದೆ ಸಮಾಜವನ್ನು ದಾರಿ ತಪ್ಪಿಸುವ ಕೆಲಸದಲ್ಲಿ, ಗೊಂದಲವನ್ನು ಉಂಟು ಮಾಡುವ ದೇಶ ದ್ರೋಹದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಸಿಎಎಯನ್ನು ದೇಶದಲ್ಲಿ ಜಾರಿಗೆ ತರಬೇಕು ಎನ್ನುವುದು ಬಹಳ ಹಿಂದಿನ ಬೇಡಿಕೆ ಅದಕ್ಕಾಗಿ ತಿದ್ದುಪಡಿ ತರಬೇಕು ಎಂದು ಹೇಳುತ್ತಿದ್ದವರು ಈಗ ಅರಾಜಕತೆ ಸೃಷ್ಟಿಸುತ್ತಿದ್ದಾರೆ ಎಂದು ಸಚಿವ ಅಶ್ವತ್ ನಾರಾಯಣ ಟೀಕಿಸಿದರು.
ಸಿಎಎ ಒಂದು ಕಾರ್ಯಕ್ರಮವಲ್ಲ ಅದು ರಾಷ್ಟ್ರೀಯತೆಯ ಪ್ರಶ್ನೆಯಾಗಿದೆ ಎಂದು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಈಶಾನ್ಯ ರಾಜ್ಯಗಳ ವಿಶ್ರಾಂತ ರಾಜ್ಯಪಾಲ ಪದ್ಮನಾಭ ಬಾಲಕೃಷ್ಣ ಆಚಾರ್ಯ ತಿಳಿಸಿದ್ದಾರೆ.
ಸರಕಾರದ ಯೋಜನೆಗಳ ಬಗ್ಗೆ ಎಬಿವಿಪಿ ಸಂಘಟನೆ ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ. ಸಮಾಜದಿಂದ ನಾವು ಏನು ಪಡೆಯುತ್ತೇವೆ ಅದನ್ನು ಮರಳಿ ಸಮಾಜಕ್ಕೆ ಕೊಡ ಬೇಕಾದರೆ ಸಮಾಜಕ್ಕೆ ನೆರವಾಗುವ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಸಮರ್ಥ ,ಸಶಕ್ತ,ರೋಗ ಮುಕ್ತ ಭಾರತ ನಿರ್ಮಾಣಕ್ಕೆ ನಾವೆಲ್ಲಾ ಶ್ರಮಿಸಬೇಕಾಗಿದೆ ಎಂದು ಡಾ.ಪದ್ಮ ನಾಭ ಬಾಲಕೃಷ್ಣ ಆಚಾರ್ಯ ತಿಳಿಸಿದ್ದಾರೆ.
ರಾಷ್ಟ್ರದ ಪುನರ್ ನಿರ್ಮಾಣದಲ್ಲಿ ಎಬಿವಿಪಿ ತೊಡಗಿಸಿಕೊಂಡಿದೆ.ಸಿಎಎ ಪರವಾಗಿ ಎಬಿವಿಪಿ ವಿಶ್ವವಿದ್ಯಾನಿಲಯಗಳಲ್ಲಿ ಮಾಹಿತಿ ನೀಡುತ್ತಿದೆ. ಸಿಎಎಯನ್ನು ವಿರೋಧಿಸಿ ನಡೆಸುತ್ತಿರುವ ಹೋರಾಟವನ್ನುಎಬಿವಿಪಿ ರಾಷ್ಟ್ರವಿರೋಧಿ ಚಟುವಟಿಕೆ ಎಂದು ಘೋಷಿಸಿದೆ ಮತ್ತು ಸಿಎಎ ಯ ಪರವಾಗಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿದೆ. ಇದರಿಂದ ಸಿಎಎ ಯನ್ನು ವಿರೋಧಿಸುವವರು ರಾಷ್ಟ್ರ ಪ್ರೇಮಿಗಳಾಗುತ್ತಿದ್ದಾರೆ ಎಂದು ಎಬಿವಿಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಅಶಿಷ್ ಚೌಹಾನ್ ತಿಳಿಸಿದ್ದಾರೆ.
ಸಮಾರಂಭದಲ್ಲಿ ಪದ್ಮ ಶ್ರೀ ಪುರಸ್ಕೃತ ಹರೇಕಳ ಹಾಜಬ್ಬರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರದರ್ಶಿನಿ ವಸ್ತು ಪ್ರದರ್ಶನ ವನ್ನು ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷೆ ಮಂಜಮ್ಮ ಜೋಗತಿ ನರವೇರಿಸಿದರು. ವೇದಿಕೆಯಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್.ಎಡಪಡಿತ್ತಾಯ ಶುಭ ಹಾರೈಸಿದರು. ಎಬಿವಿಪಿ ರಾಜ್ಯಾಧ್ಯಕ್ಷ ಡಾ.ಅಲ್ಲಮ ಪ್ರಭು ಗುಡ್ಡ , ಕಾರ್ಯದರ್ಶಿ ಹರ್ಷ ನಾರಾಯಣ, ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಮಹಾಲಕ್ಷ್ಮೀ ಭೂಶಿ ಮೊದಲಾದವರು ಉಪಸ್ಥಿತರಿದ್ದರು. ಸ್ವಾಗತ ಸಮಿತಿಯ ಅಧ್ಯಕ್ಷ ಕೆ.ಸಿ.ನಾಯಕ್ ಸ್ವಾಗತಿಸಿದರು. ಕಾರ್ಯದರ್ಶಿ ಶಾಂತರಾಮ ಶೆಟ್ಟಿ ವಂದಿಸಿದರು.