×
Ad

ಬ್ಯಾಂಕ್‌ಗಳ ವಿಲೀನಕ್ಕೆ ಬೆಂಬಲವಿಲ್ಲ: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

Update: 2020-02-07 22:08 IST

ಮಂಗಳೂರು, ಫೆ.7: ಅವಿಭಜಿತ ದ.ಕ.ಜಿಲ್ಲೆಯು ದೇಶ-ವಿದೇಶಗಳಲ್ಲಿ ಗಮನ ಸೆಳೆಯಲು, ಪ್ರಖ್ಯಾತಗೊಳ್ಳಲು ಇಲ್ಲಿ ಜನ್ಮ ತಾಳಿದ ಬ್ಯಾಂಕ್‌ಗಳ ಕೊಡುಗೆಯೂ ಇದೆ. ಈಗಾಗಲೆ ವಿಜಯಾ ಬ್ಯಾಂಕನ್ನು ಕಳೆದ ವರ್ಷ ವಿಲೀನಗೊಳಿಸಲಾಗಿದೆ. ಇದೀಗ ಸಿಂಡಿಕೇಟ್ ಮತ್ತು ಕಾರ್ಪೊರೇಶನ್ ಬ್ಯಾಂಕ್‌ಗಳನ್ನು ವಿಲೀನಗೊಳಿಸಲು ಸರಕಾರ ಮುಂದಾಗಿದೆ. ಇದಕ್ಕೆ ನಮ್ಮ ಸಹಮತವಿಲ್ಲ, ಬೆಂಬಲವಿಲ್ಲ. ಕೇಂದ್ರ ಸರಕಾರ ಈ ವಿಲೀನ ಪ್ರಕ್ರಿಯೆಯನ್ನು ಕೈ ಬಿಡಬೇಕು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಕರಾವಳಿ ಬ್ಯಾಂಕ್‌ಗಳ ಉಳಿಸಿ ಹೋರಾಟ ಸಮಿತಿಯ ವತಿಯಿಂದ ಶುಕ್ರವಾರ ನಗರ ಸಿಬಿಒಒ ಸೆಂಟರ್‌ನಲ್ಲಿ ಬ್ಯಾಂಕ್‌ಗಳ ವಿಲೀನ ವಿರೋಧಿಸಿ ನಡೆಸಲಾಗುವ ಹೋರಾಟದ ಲೋಗೋ ಅನಾವರಣಗೊಳಿಸಿ ಅವರು ಮಾತನಾಡಿದರು.

ಕರಾವಳಿಗರಿಗೆ ಸರಕಾರ ಅರ್ಹತೆಗೆ ಆಧಾರದ ಮೇಲೆ ಸೂಕ್ತ ಉದ್ಯೋಗವಕಾಶ ಕಲ್ಪಿಸಿಕೊಟ್ಟಿಲ್ಲ. ಆದರೂ ಇಲ್ಲಿನ ಜನರು ಸ್ವಾವಲಂಬಿಗಳಾಗಿ ದ್ದಾರೆ. ಅದರ ಫಲವಾಗಿಯೇ ಜಿಲ್ಲೆಯಲ್ಲಿ ಹಲವು ಬ್ಯಾಂಕ್‌ಗಳು ಜನ್ಮ ತಾಳಿವೆ. ಅವುಗಳು ನಾಡಿನ ಬಹುತೇಕ ಮಂದಿಯ ಜೀವನಮಟ್ಟ ಹೆಚ್ಚಿ ಸಿವೆ, ಉದ್ಯೋಗ ದೊರಕಿಸಿಕೊಟ್ಟಿವೆ. ಅಂತಹ ಬ್ಯಾಂಕ್‌ಗಳನ್ನು ವಿಲೀನಗೊಳಿಸಿದರೆ ಮತ್ತೆ ಇಲ್ಲಿ ನಿರುದ್ಯೋಗ ಭೀತಿಯಾಗಬಹುದು. ಅದನ್ನು ಅರ್ಥ ಮಾಡಿಕೊಂಡು ಸರಕಾರ ತನ್ನ ವಿಲೀನ ಪ್ರಕ್ರಿಯೆಯಿಂದ ಹಿಂದೆ ಸರಿಯಬೇಕು ಎಂದು ಸ್ವಾಮೀಜಿ ಕರೆ ನೀಡಿದರು.

ಮಂಗಳೂರು ಬಿಷಪರ ಸಾರ್ವಜನಿಕ ಸಂಪರ್ಕ ಅಧಿಕಾರಿ ಫಾ. ವಿಕ್ಟರ್ ವಿಜಯ್ ಲೋಬೋ ಕರಪತ್ರ ಬಿಡುಗಡೆಗೊಳಿಸಿದರು. ಮಾಜಿ ಸಚಿವ ಸುಬ್ಬಯ್ಯ ಶೆಟ್ಟಿ ಸ್ಟಿಕ್ಕರ್ ಅನಾವರಣಗೊಳಿಸಿದರು. ಕಾರ್ಪೊರೇಶನ್ ಬ್ಯಾಂಕ್ ಅಧಿಕಾರಿಗಳ ಸಂಘದ ಮುಖಂಡ ಟಿ.ಆರ್.ಭಟ್ ‘ಜನಪ್ರತನಿಧಿ ಗಳಿಗೆ ನೀಡಲಾಗುವ ಮನವಿ ಪತ್ರ’ವನ್ನು ಬಿಡುಗಡೆಗೊಳಿಸಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಹೋರಾಟ ಸಮಿತಿಯ ಸಂಚಾಲಕ ದಿನೇಶ್ ಹೆಗ್ಡೆ ಉಳೆಪ್ಪಾಡಿ ದ.ಕ.ಜಿಲ್ಲೆಯಲ್ಲಿ ಜನ್ಮ ತಾಳಿದ ವಿಜಯಾ ಬ್ಯಾಂಕನ್ನು ಕಳೆದ ಬಾರಿ ವಿಲೀನಗೊಳಿಸುವಾಗ ಇಲ್ಲಿನ ಆಡಳಿತ ಮತ್ತು ವಿಪಕ್ಷಗಳು ಸಮರ್ಪಕವಾಗಿ ಹೋರಾಟ ಮಾಡಿರಲಿಲ್ಲ. ಅದರ ಫಲವಾಗಿಯೇ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಜನ್ಮ ತಾಳಿದ ಸಿಂಡಿಕೇಟ್ ಮತ್ತು ಕಾರ್ಪೊರೇಶನ್ ಬ್ಯಾಂಕನ್ನು ವಿಲೀನಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ. ಈ ಸಂದರ್ಭ ಆಡಳಿತ ಪಕ್ಷವು ಇದರ ವಿರುದ್ಧ ಧ್ವನಿ ಎತ್ತದು. ಆದರೆ, ವಿಪಕ್ಷವು ವೌನ ತಾಳಿರುವುದು ಅಚ್ಚರಿ ಹುಟ್ಟಿಸಿದೆ. ಒಂದೋ ವಿಪಕ್ಷಗಳು ನಮ್ಮ ಹೋರಾಟವನ್ನು ಬೆಂಬಲಿಸಬೇಕು ಇಲ್ಲವೇ ಹೋರಾಟಕ್ಕೆ ನೇತೃತ್ವ ನೀಡಬೇಕು. ಇಲ್ಲದಿದ್ದರೆ ಈ ಎರಡೂ ಬ್ಯಾಂಕ್‌ ಗಳನ್ನು ನಾವು ಕಳಕೊಳ್ಳಲಿದ್ದೇವೆ ಎಂದರು.

ಬ್ಯಾಂಕ್‌ಗಳ ವಿಲೀನದ ಹಿಂದೆ ಪ್ರಬಲ ರಾಜಕೀಯ ಅಜೆಂಡಾ ಇದೆ. ಇದನ್ನು ವಿಪಕ್ಷಗಳು ಅರ್ಥ ಮಾಡಿಕೊಳ್ಳಬೇಕು. ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತನ್ನದೇ ರೀತಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ಆದರೆ, ಅವರು ಜನಸಾಮಾನ್ಯರ ಬಳಿಗೆ ಈ ಸಮಸ್ಯೆಯನ್ನು ಕೊಂಡೊಯ್ದು ಅವರ ಸಹಕಾರ ಪಡೆದು ತೀವ್ರತರದ ಹೋರಾಟ ಮಾಡಬೇಕಿದೆ. ಮುಂದಿನ ದಿನಗಳಲ್ಲಿ ಹೋರಾಟ ಸಮಿತಿಯು ಕರಾವಳಿಯ ಮೂರು ಜಿಲ್ಲೆಗಳಲ್ಲಿ ಹೋಬಳಿ ಮಟ್ಟದಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ದಿನೇಶ್ ಹೆಗ್ಡೆ ಉಳೆಪ್ಪಾಡಿ ಎಚ್ಚರಿಸಿದರು.

ಹೋರಾಟ ಸಮಿತಿಯ ಎಚ್.ವಿ.ರಾವ್ ವಂದಿಸಿದರು. ಮುನೀರ್ ಕಾಟಿಪಳ್ಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News