ಒಳಚರಂಡಿ ನೀರು ತೋಡಿಗೆ ಬಿಟ್ಟರೆ ಕ್ರಿಮಿನಲ್ ಕೇಸ್: ಅಧಿಕಾರಿಗಳಿಗೆ ಶಾಸಕ ಭರತ್ ಶೆಟ್ಟಿ ಎಚ್ಚರಿಕೆ

Update: 2020-02-07 16:41 GMT

ಸುರತ್ಕಲ್ : ಯುಜಿಡಿಯ ದುರಸ್ತಿ ಕಾಮಗಾರಿಯು ಅಮೃತ ಯೋಜನೆ ಮೂಲಕ ಆಗುತ್ತಿದ್ದು, ಈ ವೇಳೆ ಯಾವುದೇ ಕಾರಣಕ್ಕೂ ಒಳಚರಂಡಿ ನೀರನ್ನು ತೋಡಿಗೆ ಬಿಡಬಾರದು. ಒಂದು ವೇಳೆ ಇಂತಹ ಘಟನೆ ಕಂಡು ಬಂದಲ್ಲಿ ಗುತ್ತಿಗೆದಾರನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾ ಗುವುದು ಎಂದು ಶಾಸಕ ಡಾ.ಭರತ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರು ಉತ್ತರ ವಿಧಾನ ಸಭ ಕ್ಷೇತ್ರದಲ್ಲಿ ಒಳಚರಂಡಿ ವ್ಯವಸ್ಥೆ, ಸಮನ್ವಯ ಹಾಗೂ ಸಮಸ್ಯೆಗಳ ಕುರಿತು ಗುರುವಾರ ನಡೆದ ಪಾಲಿಕೆ ಸದಸ್ಯರ, ಕೆಯುಐಡಿಎಫ್ ಸಿ, ಪಾಲಿಕೆ ಇಂಜಿನಿಯರ್‌ಗಳ ಸಭೆಯಲ್ಲಿ ಅವರು ಮಾತನಾಡಿದರು.

ಅಮೃತ ಯೋಜನೆಯಲ್ಲಿ ನಗರ ವ್ಯಾಪ್ತಿಯ ಒಳಚರಂಡಿ ದುರಸ್ತಿಗೆ ಸುಮಾರು 60 ಕೋ.ರೂ.ಅನುದಾನ ಮೀಸಲಿಡಲಾಗಿದೆ. ಈಗಾಗಲೇ ಹಲವೆಡೆ ದುರಸ್ತಿ ಕ್ರಮ ಕೈಗೊಳ್ಳುವಾಗ ಪಕ್ಕದ ತೋಡಿಗೆ ನೀರು ಬಿಡಲಾಗುತ್ತಿರುವ ದೂರು ಬಂದಿದೆ. ಇದರಿಂದ ಹಲವು ಬಾವಿಗಳ ನೀರು ಮಲೀನವಾಗಿದೆ.ಇದಕ್ಕೆ ಗುತ್ತಿಗೆದಾರ ಅವೈಜ್ಞಾನಿಕ ಕಾಮಗಾರಿಯು ಕಾರಣವಾಗಿದೆ. ಇದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸ ಬೇಕಿದೆ. ಅದಕ್ಕಾಗಿ ಸೂಕ್ತ ವ್ಯವಸ್ಥೆ ಕೈಗೊಂಡು ದುರಸ್ತಿ ಮಾಡಬೇಕು. ಭವಿಷ್ಯದಲ್ಲಿ ಈ ಕೆಟ್ಟ ಪದ್ದತಿ ಮುಂದುವರಿಸಿದರೆ ಗುತ್ತಿಗೆದಾರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದರು.

ಕೆಯುಐಡಿಎಫ್ ಸಿ ಅಧಿಕಾರಿ ಮಂಜುನಾಥ್, ಅಭಿಯಂತರ ಜಯಪ್ರಕಾಶ್, ಎಇ ವಿಲ್ಸನ್, ಅಭಿಯಂತರ ವೆಂಕಟರಮಣ, ಪಾಲಿಕೆಯ ಹಿರಿಯ ಅಭಿಯಂತರ ಗುರುಪ್ರಸಾದ್, ಸ್ಥಳೀಯ ಕಾರ್ಪೊರೇಟರ್‌ಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News