2034ರ ವೇಳೆಗೆ ಅರಬ್ ದೇಶಗಳ 2 ಟ್ರಿಲಿಯನ್ ಡಾಲರ್ ಸಂಪತ್ತು ಮಾಯ!

Update: 2020-02-07 17:03 GMT

ನ್ಯೂಯಾರ್ಕ್, ಫೆ. 7: ಪರ್ಷಿಯನ್ ಕೊಲ್ಲಿಯಲ್ಲಿರುವ ಅರಬ್ ರಾಜಪ್ರಭುತ್ವಗಳು ಇನ್ನು 15 ವರ್ಷಗಳಲ್ಲಿ ತಮ್ಮ 2 ಟ್ರಿಲಿಯ ಡಾಲರ್ (ಸುಮಾರು 140 ಲಕ್ಷ ಕೋಟಿ ರೂಪಾಯಿ) ಸಂಪತ್ತನ್ನು ಕಳೆದುಕೊಳ್ಳಲಿವೆ ಎಂದು ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅಭಿಪ್ರಾಯಪಟ್ಟಿದೆ.

ಈಗ ತೈಲ ಬೇಡಿಕೆ ಗರಿಷ್ಠ ಮಟ್ಟವನ್ನು ತಲುಪಿದ್ದು, ಇನ್ನು 15 ವರ್ಷಗಳಲ್ಲಿ ಬೇಡಿಕೆ ಇಳಿಮುಖವಾಗಲು ಆರಂಭಿಸುತ್ತದೆ ಹಾಗೂ ಆಗ ಅದರ ಬಿಸಿ ಅರಬ್ ದೇಶಗಳಿಗೆ ತಟ್ಟುತ್ತದೆ ಎಂದು ಐಎಂಎಫ್ ಅಭಿಪ್ರಾಯಪಟ್ಟಿದೆ.

ಜಾಗತಿಕ ತೈಲ ಬೇಡಿಕೆಯು ನಿರೀಕ್ಷೆಗಿಂತ ಮುಂಚೆಯೇ ಕುಸಿಯಲು ಆರಂಭಿಸಬಹುದು. ಆಗ ಆರು ಸದಸ್ಯರ ಕೊಲ್ಲಿ ಸಹಕಾರ ಮಂಡಳಿಯ ಆರ್ಥಿಕತೆ ಒತ್ತಡಕ್ಕೆ ಸಿಲುಕುತ್ತದೆ ಎಂದು ಐಎಂಎಫ್ ಗುರುವಾರ ವರದಿಯೊಂದರಲ್ಲಿ ಹೇಳಿದೆ. ಕೊಲ್ಲಿ ಸಹಕಾರ ಮಂಡಳಿಯ ಈ ಆರು ದೇಶಗಳು ಜಗತ್ತಿನ ಒಟ್ಟು ತೈಲ ಉತ್ಪಾದನೆಯ ಐದನೇ ಒಂದು ಭಾಗವನ್ನು ಉತ್ಪಾದಿಸುತ್ತದೆ.

ಕೊಲ್ಲಿ ಸಹಕಾರ ಮಂಡಳಿಯ ಸದಸ್ಯ ದೇಶಗಳು: ಸೌದಿ ಅರೇಬಿಯ, ಕುವೈತ್, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಒಮಾನ್, ಬಹರೈನ್ ಮತ್ತು ಕತರ್.

 ನಿರ್ಣಾಯಕ ಆರ್ಥಿಕ ಸುಧಾರಣೆಗಳಿಲ್ಲದೆ ಮಧ್ಯ ಪ್ರಾಚ್ಯದ ಅತಿ ಶ್ರೀಮಂತ ದೇಶಗಳು 2034ರ ವೇಳೆಗೆ ತಮ್ಮ ನಿವ್ವಳ ಆರ್ಥಿಕ ಸಂಪತ್ತನ್ನು ಕಳೆದುಕೊಳ್ಳಬಹುದು. ಯಾಕೆಂದರೆ, ಆ ವೇಳೆಗೆ ಈ ದೇಶಗಳು ಸಾಲಗಾರ ದೇಶಗಳಾಗಿರುತ್ತವೆ ಎಂದು ಐಎಂಎಫ್ ವರದಿ ಅಭಿಪ್ರಾಯಪಟ್ಟಿದೆ. ಇನ್ನೊಂದು ದಶಕದಲ್ಲಿ ಆ ದೇಶಗಳ ಒಟ್ಟು ತೈಲೇತರ ಸಂಪತ್ತು ಕೂಡ ವ್ಯಯವಾಗುತ್ತದೆ ಎಂದಿದೆ.

ಐಎಂಎಫ್‌ನ ವರದಿಯನ್ನು ಅದರ ಮಧ್ಯಪ್ರಾಚ್ಯ ಮತ್ತು ಮಧ್ಯ ಏಶ್ಯ ಪರಿಣತರು ಅದರ ಸಂಶೋಧನಾ ವಿಭಾಗದ ನೆರವಿನೊಂದಿಗೆ ತಯಾರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News