ಮಂಗಳೂರಿಗೆ ಬರುತ್ತಿದ್ದ ಎರಡು ರೈಲುಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ

Update: 2020-02-08 06:20 GMT
ಸಾಂದರ್ಭಿಕ ಚಿತ್ರ

ಕಾಸರಗೋಡು, ಫೆ.8: ಮಂಗಳೂರಿಗೆ ತೆರಳುತ್ತಿದ್ದ ಎರಡು ರೈಲುಗಳಲ್ಲಿ ಭಾರೀ ಕಳ್ಳತನ ನಡೆದಿದ್ದು, ಪ್ರಯಾಣಿಕರಿಗೆ ಸೇರಿದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ದೋಚಲಾಗಿದೆ.

ಚೆನ್ನೈ - ಮಂಗಳೂರು  ನಡುವಿನ ಸೂಪರ್ ಫಾಸ್ಟ್ ಮತ್ತು ಮಲಬಾರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಈ ಕಳವು ನಡೆದಿದ್ದು, ಪ್ರಯಾಣಿಕರ ಸುಮಾರು 50 ಲಕ್ಷ  ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಆಗಿರುವುದಾಗಿ ತಿಳಿದುಬಂದಿದೆ.

ತಿರುವನಂತಪುರ- ಮಂಗಳೂರು ನಡುವಿನ ಮಲಬಾರ್ ಎಕ್ಸ್ ಪ್ರೆಸ್ ನಲ್ಲಿ ಕಾಞ೦ಗಾಡ್ ನಿವಾಸಿಯ ಹದಿನೈದು ಪವನ್ ಚಿನ್ನಾಭರಣ ಕಳವುಗೈಯ್ಯಲಾಗಿದ್ದು, ಸುಮಾರು 35 ಲಕ್ಷ ರೂ. ಮೌಲ್ಯ ಅಂದಾಜಿಸಲಾಗಿದೆ. ಇದಲ್ಲದೆ ಬ್ಯಾಗ್ ನಲ್ಲಿದ್ದ ಎಟಿಎಂ ಕಾರ್ಡ್, ಪಾಸ್ ಪೋರ್ಟ್ ಹಾಗೂ ಇನ್ನಿತರ ವಸ್ತುಗಳು ಕೂಡಾ ಕಳವಾಗಿದೆ ಎಂದು ರೈಲ್ವೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

 ಚೆನ್ನೈ - ಮಂಗಳೂರು  ಸೂಪರ್ ಫಾಸ್ಟ್ ರೈಲಿನಲ್ಲಿ  ಚೆನ್ನೈ ನಿವಾಸಿಯೊಬ್ಬರ 21 ಪವನ್ ಚಿನ್ನಾಭರಣ ಮತ್ತು ಡೈಮಂಡ್ ಕಳವಾಗಿದೆ. ಎರಡು ಕೃತ್ಯಗಳು ಒಂದೇ ತಂಡ ನಡೆಸಿರಬಹುದು ಎಂದು ರೈಲ್ವೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News