ಕೊರೋನ ಅವಾಂತರ: ಮುಂದೂಡಲ್ಪಟ್ಟ ಉಳ್ಳಾಲದ ಯುವಕನ ವಿವಾಹ
ಉಳ್ಳಾಲ, ಫೆ.8: ಚೀನ ಮೂಲದ ಪ್ರವಾಸಿ ಹಡಗಿನ ಸಿಬ್ಬಂದಿ, ಉಳ್ಳಾಲ ಮೂಲದ ಯುವಕ ಸೋಮವಾರ ನಿಗದಿಯಾಗಿದ್ದ ತನ್ನ ವಿವಾಹಕ್ಕೆ ಬರಲಾಗದ ಕಾರಣ ವಿವಾಹವೇ ಮುಂದೂಡಲ್ಪಟ್ಟಿದೆ. ಇದಕ್ಕೆಲ್ಲ ಕಾರಣವಾಗಿರುವುದು ಕೊರೋನ ವೈರಸ್ ಭೀತಿ.
ಕುಂಪಲದ ಮಾಧವ ಬಂಗೇರ ಎಂಬವರ ಪುತ್ರ ಗೌರವ್ ಅವರು ಚೀನ ಮೂಲದ ಸ್ಟಾರ್ ಕ್ರೂಝ್ ಎಂಬ ಪ್ರವಾಸಿ ಹಡಗಿನ ಸಿಬ್ಬಂದಿಯಾಗಿದ್ದಾರೆ. ಅವರ ವಿವಾಹಕ್ಕೆ ದಿನ ನಿಗದಿಯಾಗಿತ್ತು. ಅದರಂತೆ ಸೋಮವಾರ(ಫೆ.10) ಮಂಗಳೂರಿನಲ್ಲಿ ಅವರ ವಿವಾಹ ನಡೆಬೇಕಿತ್ತು. ಇದಕ್ಕಾಗಿ ಗೌರವ್ ಪೂರ್ವ ನಿಗದಿಯಂತೆ ಮಾಡಿದಂತೆ ಶುಕ್ರವಾರ ಬೆಳಗ್ಗೆ ಊರಿಗೆ ತಲುಪಬೇಕಿತ್ತು. ಆದರೆ ಕೊರೋನ ಭೀತಿಯ ಹಿನ್ನೆಲೆಯಲ್ಲಿ ಅವರ ಹಡಗಿಗೆ ನಿಗದಿ ಮಾಡಲಾಗಿದ್ದ ತಾಣದಲ್ಲಿ ಪ್ರವಾಸ ಮುಕ್ತಾಯ ಮಾಡಲು ಅವಕಾಶ ನಿರಾಕರಿಸಲಾಗಿದೆ. ಅಲ್ಲದೆ ಹಡಗಿನಲ್ಲಿದ್ದವರಿಗೆ ಸದ್ಯ ಹೊರಗಿಳಿಯದಂತೆ ದಿಗ್ಬಂಧನ ವಿಧಿಸಿರುವುದರಿಂದ ಗೌತಮ್ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಸದ್ಯ ಗೌತಮ್ ಇರುವ ಅವರ ಹಡಗು ಹಾಂಕಾಂಗ್ ತಲುಪಿದ್ದು, ಕೊರೋನ ಭೀತಿಯಿಂದಾಗಿ ಅದರಲ್ಲಿದ್ದ ಎಲ್ಲರನ್ನೂ ಹಡಗಿನಲ್ಲಿಯೇ ಉಳಿಸಿಕೊಂಡು ನಿಗಾ ಇರಿಸಲಾಗಿದೆ. ಆದ್ದರಿಂದ ಹಡಗಿನಲ್ಲಿರುವ ಸಾವಿರಾರು ಮಂದಿ ಎಲ್ಲಿಯೂ ಹೋಗಲಾರದೆ ಸಿಲುಕಿಕೊಂಡಿದ್ದಾರೆ.
ಗೌರವ್ ಅವರಿದ್ದ ಹಡಗು ಜ.26ರಂದು ಚೀನದಿಂದ ಪ್ರವಾಸ ಬೆಳೆಸಿ ತೈವಾನ್‌ನಲ್ಲಿ ಫೆ.5ರಂದು ಪ್ರವಾಸ ಕೊನೆಗೊಳಿಸಬೇಕಿತ್ತು. ಆದರೆ ಈ ನಡುವೆ ಕೊರೋನ ವೈರಸ್ ವಿವಿಧ ದೇಶಗಳಿಗೆ ಹರಡಿದ ಹಿನ್ನಲೆಯಲ್ಲಿ ಚೀನಾದಿಂದ ಹೊರಟಿದ್ದ ಈ ನೌಕೆಯ ಮೇಲೂ ಶಂಕೆಯಾಗಿ ತೈವಾನ್‌ನಲ್ಲಿ ಜನರನ್ನು ಇಳಿಸಲು ಅವಕಾಶ ನೀಡಿರಲಿಲ್ಲ. ಆ ಬಳಿಕ ಹಡಗು ಹಾಂಕಾಂಗ್‌ಗೆ ಪ್ರಯಾಣಿಸಿತು. ಅಲ್ಲಿಯೂ ನಿರ್ಬಂಧ ವಿಧಿಸಿದ್ದರಿಂದ ಸದ್ಯ ಹಡಗು ಬಂದರು ಪ್ರದೇಶದಲ್ಲಿ ಲಂಗರು ಹಾಕಿದೆ.
ಈಗಾಗಲೇ ಹಡಗಿನಲ್ಲಿರುವ ಎಲ್ಲ ಸಿಬ್ಬಂದಿ ಸೇರಿದಂತೆ ಪ್ರಯಾಣಿಕರನ್ನು ಒಂದು ಬಾರಿ ತಪಾಸಣೆ ನಡೆಸಲಾಗಿದೆ. ಆ ಪೈಕಿ ಯಾರಲ್ಲೂ ಕೊರೋನ ಸೋಕು ತಗಲಿರುವುದು ದೃಢಪಟ್ಟಿಲ್ಲ. ಹಡಗಿನಲ್ಲಿ 1,600 ಪ್ರಯಾಣಿಕರಿದ್ದು, ನೂರಾರು ಮಂದಿ ಸಿಬ್ಬಂದಿ ಇದ್ದಾರೆ. ಈ ಹಡಗಿನಲ್ಲಿ ಒಟ್ಟು 80 ಮಂದಿ ಭಾರತೀಯರೂ ಇದ್ದಾರೆ.