×
Ad

ಜಪ್ಪಿನಮೊಗರು: ‘ಜಯ-ವಿಜಯ’ ಜೋಡುಕರೆ ಕಂಬಳ ಉದ್ಘಾಟನೆ

Update: 2020-02-08 12:10 IST

ಮಂಗಳೂರು, ಫೆ.8: ತುಳನಾಡಿನ ಜಾನಪದ ಕ್ರೀಡೆಗಳಲ್ಲಿ ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿರುವ ಕಂಬಳ ಕ್ರೀಡೆಯಲ್ಲಿ ಕೋಣಗಳ ಒಣಪು- ಒಯ್ಯಿರದ ಜತೆಗೆ ಅದನ್ನು ಓಡಿಸುವವರ ಚಾಕಚಕ್ಯತೆಯೇ ಪ್ರಮುಖ. ನಗರದಲ್ಲಿ ಸದ್ಯ ನಡೆಯುವ ಬೆರಳೆಣಿಕೆಯ ಕಂಬಳಗಳಲ್ಲಿ ಜಪ್ಪಿನಮೊಗರು ಜಯ- ವಿಜಯ ಜೋಡುಕರೆ ಕಂಬಳ ಕೂಡಾ ಒಂದು.

ಜಪ್ಪಿನಮೊಗರಿನ ನೇತ್ರಾವತಿ ಕಡಲ ತೀರದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಈ ಜಯ ವಿಜಯ ಜೋಡು ಕರೆ ಕಂಬಳಕ್ಕೆ ಇಂದು ಬೆಳಗ್ಗೆ ಚಾಲನೆ ದೊರಕಿದ್ದು, ಕಂಬಳದ ಕೋಣಗಳು ಸ್ಪರ್ಧೆಗೆ ಸಮಾಗಮಗೊಂಡಿವೆ.

ಜೆ.ಜಯಗಂಗಾಧರ ಶೆಟ್ಟಿ ಮನ್ಕುತೋಟಗುತ್ತು ಹಾಗೂ ನಾಡಾಜೆಗುತ್ತು ಇವರ ಸ್ಮರಣಾರ್ಥವಾಗಿ ದಶಮಾನೋತ್ಸವದ ಹೊನಲು ಬೆಳಕಿನ ‘ಜಯ-ವಿಜಯ’ ಜೋಡುಕರೆ ಕಂಬಳಕ್ಕಾಗಿ ನೇತ್ರಾವತಿ ನದಿ ತೀರದ ಸುಮಾರು 2 ಎಕರೆ ಪ್ರದೇಶದಲ್ಲಿ ವ್ಯವಸ್ಥೆಯನ್ನು ಮಾಡಲಾಗಿದೆ. ಕೋಣಗಳಿಗೆ ಸ್ನಾನಕ್ಕೆ ನೀರಿನ ವ್ಯವಸ್ಥೆಯೊಂದಿಗೆ, ವಿಶ್ರಾಂತಿಗೆ ವ್ಯವಸ್ಥೆ, ಕಂಬಳ ವೀಕ್ಷಣೆಗೆ ವ್ಯವಸ್ಥೆಯೊಂದಿಗೆ ಅಂದಾಜು 100ಕ್ಕೂ ಅಧಿಕ ಜೋಡಿ ಕಂಬಳದ ಕೋಣಗಳ ನಿರೀಕ್ಷೆಯೊಂದಿಗೆ ಕಂಬಳಕ್ಕೆ ಚಾಲನೆ ದೊರಕಿದೆ.

ವೇದಿಕೆಯಲ್ಲಿ ಗರೋಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಗರೋಡಿ, ನೀಲಕಂಠ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಮಂಜುನಾಥ ಭಂಡಾರಿ, ಸೂರ್ಯನಾರಾಯಣ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಬಾಲಕೃಷ್ಣ ಕೊಟ್ಟಾರಿ, ಮಾಜಿ ಕಾರ್ಪೊರೇಟರ್ ಸುರೇಂದ್ರ ಜೆ., ಪ್ರಚಾರ ಸಮಿತಿಯ ನಾಗೇಂದ್ರ ಕುಮಾರ್, ಹರಿಯಪ್ಪ ಶೆಟ್ಟಿ, ಮಾಜಿ ಉಪ ಮೇಯರ್ ಜೆ.ಎ.ಸಲೀಂ, ಮೋಹನ್‌ದಾಸ್ ಕಿಲ್ಲೆ, ಭಾಸ್ಕರ ಚಂದ್ರ ಶೆಟ್ಟಿ, ರಾಜಾನಂದ ರೈ, ವಿಶ್ವನಾಥ ಆಳ್ವ, ಪ್ರವೀಣ್ ಬಜ್ಪೆ, ಉಮನ ಪೂಜಾರಿ, ಕೃಷ್ಣ ಶೆಟ್ಟಿ, ಗಣೇಶ್ ಶೆಟ್ಟಿ, ಗಣೇಶ್ ಶೆಟ್ಟಿ ಗುಡ್ಡೆಗುತ್ತು ಹಾಗೂ ಕಂಬಳ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಚಾರ ಸಮಿತಿಯ ಜೆ. ಸೀತಾರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷ್ಮೀಶ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಉಮೇಶ್ ಅತಿಕಾರಿ ವಂದಿಸಿದರು.

ಗಮನ ಸೆಳೆಯುತ್ತಿಗೆ ಕಂಬಳ ಓಡಿಸುವ ಸ್ತಬ್ಧ ಚಿತ್ರ
ಜಯ- ವಿಜಯ ಕಂಬಳ ನಡೆಯುತ್ತಿರುವ ಪ್ರದೇಶದ ಪ್ರವೇಶ ದ್ವಾರದಲ್ಲಿ ರಚನೆ ಮಾಡಲಾಗಿರುವ ಕಂಬಳ ಓಡಿಸುವ ಸ್ತಬ್ಧ ಚಿತ್ರ ಗಮನ ಸೆಳೆಯುತ್ತಿದೆ. ಕಂಬಳ ಓಡಿಸುವ ವ್ಯಕ್ತಿಯ ಜತೆಗೆ ಕಂಬಳದಲ್ಲಿ ಓಡುತ್ತಿರುವ ಕೋಣಗಳು ಅವುಗಳ ಮೇಲೆ ಕಾರಂಜಿಯಿಂದ ಸಿಂಚನಗೊಳ್ಳುತ್ತಿರುವ ನೀರು ನೋಡುಗರಿಗೆ ಕಂಬಳದ ಶ್ರೀಮಂತಿಕೆಯನ್ನು ಸಾರುತ್ತಿದೆ.


ಸರಕಾರ ಪ್ರಾಯೋಜಿತ ಕಂಬಳ ನಡೆಯಲಿ: ಪ್ರವೀಣಚಂದ್ರ ಆಳ್ವ

ಮಂಗಳೂರು ನಗರದಲ್ಲಿ ನಾಲ್ಕೈದು ಸ್ಥಳಗಳಲ್ಲಿ ಕಂಬಳ ನಡೆಯುತ್ತಿದ್ದು, ಅದರಲ್ಲಿ ಜಯ ವಿಜಯ ಕಂಬಳದ ಮೂಲಕ ಅಂತಾರಾಷ್ಟ್ರೀಯವಾಗಿ ಜಪ್ಪಿನಮೊಗರು ಗ್ರಾಮವನ್ನು ಗುರುತಿಸಲು ಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಸರಕಾರ ಪ್ರಾಯೋಜಿತ ಕಂಬಳಗಳು ನಡೆದರೆ ದ.ಕ. ಜಿಲ್ಲೆಯ ಕಂಬಳಗಳಿಗೆ ಶಕ್ತಿ ನೀಡಿದಂತಾಗುತ್ತದೆ. ಪಿಲಿಕುಳದಲ್ಲಿ ಸರಕಾರದ ವತಿಯಿಂದ ನಡೆಸಲಾಗುವ ಕಂಬಳವನ್ನು ಸರಕಾರ ನಡೆಸಬೇಕು ಎಂದು ಮನಪಾ ನಿಯೋಜಿತ ಸದಸ್ಯ ಪ್ರವೀಣ್‌ಚಂದ್ರ ಆಳ್ವ ಎಂದು ಒತ್ತಾಯಿಸಿದರು.

ಜಯ ವಿಜಯ ಕಂಬಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ದೇರೆಬೈಲ್ ವೇದಮೂರ್ತಿ ವಿಠಲದಾಸ್ ತಂತ್ರಿಗಳು ಹೊನಲು ಬೆಳಕಿನ ಕಂಬಳವನ್ನು ಉದ್ಘಾಟಿಸಿದರು.

ಕರಾವಳಿ ಕಾಲೇಜು ಸಮೂಹ ಸಂಸ್ಥೆಯ ಅಧ್ಯಕ್ಷ ಗಣೇಶ್ ರಾವ್, ಸ್ಥಳೀಯ ಮನಪಾ ನಿಯೋಜಿತ ಸದಸ್ಯೆ ವೀಣಾ ಮಂಗಳ ಕಂಬಳಕ್ಕೆ ಶುಭ ಹಾರೈಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News