ಕಾಂಗ್ರೆಸ್ ನಾಯಕನ ಕುರಿತ ನಕಲಿ ವೀಡಿಯೋ ಪೋಸ್ಟ್ ಮಾಡಿದ ಸಂಬಿತ್ ಪಾತ್ರ ಕೇಳಿದ್ದೇನು ?

Update: 2020-02-08 06:41 GMT

ಹೊಸದಿಲ್ಲಿ : ಮಾಜಿ ಕಾಂಗ್ರೆಸ್ ಸಂಸದ ಹಾಗೂ ಮಾಜಿ ಶಾಸಕ ನಸೀಂ ಖಾನ್ ಅವರು ‘ಪಾಕಿಸ್ತಾನ್ ಜಿಂದಾಬಾದ್' ಎಂಬ ಘೋಷಣೆ ಕೂಗುತ್ತಿರುವಂತೆ ಕೇಳಿಸುವ ನಕಲಿ ವೀಡಿಯೋವೊಂದನ್ನು ಶುಕ್ರವಾರ ಟ್ವೀಟ್ ಮಾಡಿದ  ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ  ನಂತರ ಅದರ ಸತ್ಯಾಸತ್ಯತೆ ಪರಾಮರ್ಶಿಸುವಂತೆ ತಮ್ಮ ಫಾಲೋವರ್ಸ್‍ಗೆ ಹೇಳಿದ್ದಾರೆ.

ಅವರ ಈ ಪೋಸ್ಟ್‍ಗೆ 6,000ಕ್ಕೂ ಅಧಿಕ ರಿಟ್ವೀಟ್‍ಗಳು ಹಾಗೂ 15,000 ಲೈಕ್‍ಗಳು ದೊರಕಿವೆ.

ವೀಡಿಯೋದಲ್ಲಿ ಖಾನ್ ಅವರು ‘ಪಾಕಿಸ್ತಾನ್ ಜಿಂದಾಬಾದ್, ಅಗರ್ ಹಿಮ್ಮತ್ ಹೈ ಮೋದೀ ಜಿ ಕೆ ಅಂದರ್, ಔರ್ ಅಗರ್ ರಾಜನಾಥ್ ನೆ ಅಪ್ನಿ ಮಾ ಕಾ ದೂದ್ ಪಿಯಾ ಹೈ, ತೋ ಉನ್‍ಕೇ ಖಿಲಾಫ್ ದೇಶದ್ರೋಹಿ ಕಾ ಮುಕದ್ಮ ದರ್ಜ್ ಕಿಯಾ ಜಾಯೆ,'' (ಮೋದಿಗೆ ಧೈರ್ಯವಿದ್ದರೆ ಹಾಗೂ ರಾಜನಾಥ್ ಸಿಂಗ್ ತಮ್ಮ ತಾಯಿಯ ಹಾಲನ್ನು ಕುಡಿದಿದ್ದೇ ಆದಲ್ಲಿ ಅವರ ವಿರುದ್ಧ ದೇಶದ್ರೋಹದ ಮೊಕದ್ದಮೆ ದಾಖಲಿಸಬೇಕು).

ಖಾನ್ ಅವರು ಮಹಾರಾಷ್ಟ್ರದ ಚಾಂದಿವಲಿ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದವರು. ಕಳೆದ ವರ್ಷದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅವರು ಶಿವಸೇನೆಯ ದಿಲೀಪ್ ಲಂಡೆ ಅವರೆದುರು ಸೋತಿದ್ದರು.

ಸಂಬಿತ್ ಪಾತ್ರ ಅವರ ಟ್ವೀಟ್ ಬೆನ್ನಲ್ಲೇ ಖಾನ್ ಅವರು ಮುಂಬೈಯ ಸಾಕಿ ನಾಕ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಾಸ್ತವವೇನು?

ಈ ವೀಡಿಯೋ 2015ರದ್ದಾಗಿದೆ. ಕವಿಗೋಷ್ಠಿ (ಮುಶಾಯರಾ) ಒಂದರಲ್ಲಿ  ಖಾನ್ ಅವರು ಭಾರತ-ಪಾಕ್ ಏಕತೆಯ ಕುರಿತಂತೆ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದರು. ಆ ವರ್ಷ ರವಿಶಂಕರ್ ಅವರು “ಭಾರತ ಮತ್ತು ಪಾಕಿಸ್ತಾನ ನಡುವೆ ಶಾಂತಿ ಹಾಗೂ ಅಭಿವೃದ್ಧಿಗೆ ಜೈ ಹಿಂದ್ ಹಾಗೂ  ಪಾಕಿಸ್ತಾನ್ ಜಿಂದಾಬಾದ್ ಜತೆಜತೆಯಾಗಿ ಸಾಗಬೇಕು'' ಎಂದು ಯಮುನಾ ತೀರದಲ್ಲಿ ನಡೆದ ಮೂರು ದಿನಗಳ ಜಾಗತಿಕ ಸಾಂಸ್ಕೃತಿಕ ಉತ್ಸವದ ಸಂದರ್ಭ ಹೇಳಿದ್ದರು.

ಖಾನ್ ಅವರ ಕುರಿತಾದ ಮೂಲ ವೀಡಿಯೋದಲ್ಲಿ ಅವರು ಪ್ರಧಾನಿ ಮೋದಿ ಹಾಗೂ ರವಿಶಂಕರ್ ಹೇಳಿಕೆಗಳ ಬಗ್ಗೆ ಮಾತನಾಡುವುದು ಕೇಳಬಹುದು.

ಮೂಲ ವೀಡಿಯೋದಲ್ಲಿ ಖಾನ್ ಅವರು “ಶ್ರೀ ರವಿಶಂಕರ್ ಅವರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆಯನ್ನು ರಾಜನಾಥ್ ಸಿಂಗ್ ಅವರ ಸಮ್ಮುಖದಲ್ಲಿಯೇ ಹೇಳಿದ್ದಾರೆ. ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗುವುದೇ ಎಂದು ದಿಲ್ಲಿಯ ಯಮುನಾ ತೀರದಲ್ಲಿ ನಾನು ಮೋದೀ ಜಿ ಅವರನ್ನು ಕೇಳಬಯಸುತ್ತೇನೆ,'' ಎಂದು  ಹೇಳಿದ್ದರು.

ನನ್ನ ಹಾಗೂ ಕಾಂಗ್ರೆಸ್ ಪಕ್ಷದ ಮಾನಹಾನಿಗೈಯ್ಯುವ ಉದ್ದೇಶದಿಂದ ಸತ್ಯಾಸತ್ಯತೆಯನ್ನು ಪರಾಮರ್ಶಿಸದೆ ಸಂಬಿತ್ ಪಾತ್ರ ಅವರು ಹಳೆಯ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವಿಧಾನಸಭಾ ಚುನಾವಣೆ ವೇಳೆ ಕೂಡ ಈ ವೀಡಿಯೋ ತಿರುಚಲಾಗಿತ್ತು, ಆಗ ಕೂಡ ಪೊಲೀಸ್ ದೂರು ದಾಖಲಿಸಲಾಗಿತ್ತು,'' ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News