×
Ad

ಮೆಟ್ರೋ ಸ್ಟೇಶನ್ ಬಳಿ ಗುಂಡಿಕ್ಕಿ ಮಹಿಳಾ ಸಬ್ ಇನ್‌ಸ್ಪೆಕ್ಟರ್‌ ಹತ್ಯೆ

Update: 2020-02-08 13:00 IST

ಹೊಸದಿಲ್ಲಿ, ಫೆ.8: ದಿಲ್ಲಿ ಪೊಲೀಸ್‌ನ 26ರ ಹರೆಯದ ಮಹಿಳಾ ಸಬ್-ಇನ್‌ಸ್ಪೆಕ್ಟರ್ ತನ್ನ ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಗುಂಡಿಟ್ಟು ಹತ್ಯೆಗೈದಿರುವ ಘಟನೆ ವಾಯುವ್ಯ ದಿಲ್ಲಿಯ ರೋಹಿಣೀ ಪ್ರದೇಶದ ಮೆಟ್ರೋ ಸ್ಟೇಶನ್ ಸಮೀಪ ಶುಕ್ರವಾರ ರಾತ್ರಿ ನಡೆದಿತ್ತು. ಮಹಿಳಾ ಸಬ್ ಇನ್ಸ್‌ಪೆಕ್ಟರ್‌ರ ಪೊಲೀಸ್ ಅಕಾಡಮಿಯ ಬ್ಯಾಚ್‌ಮೇಟ್ ಈ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದ್ದು, ಆತ ಕೂಡ ಇಂದು ಆತ್ಮಹತ್ಯೆ ಮಾಡಿದ್ದಾನೆ.

ಗುಂಡೇಟಿನಿಂದ ಮೃತಪಟ್ಟಿರುವ ಮಹಿಳಾ ಇನ್‌ಸ್ಪೆಕ್ಟರ್‌ರನ್ನು ಪ್ರತಾಪ್‌ಗಂಜ್ ಕೈಗಾರಿಕಾ ಪ್ರದೇಶದ ಪೊಲೀಸ್ ಠಾಣೆಗೆ ನಿಯೋಜಿಸಲಾಗಿರುವ ಪ್ರೀತಿ ಅಹ್ಲಾವತ್ ಎಂದು ಗುರುತಿಸಲಾಗಿದೆ.

2018ರ ಬ್ಯಾಚಿನ ದೀಪಾಂಶು ರಥಿ ತನ್ನ ಬ್ಯಾಚ್‌ಮೇಟ್ ಪ್ರೀತಿಯ ತಲೆಗೆ ಗುಂಡಿಟ್ಟು ಸಾಯಿಸಿರುವ ಆರೋಪಿಯಾಗಿದ್ದು, ಈತ ಹರ್ಯಾಣದ ಸೋನಿಪತ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಶೂಟರ್ ಪತ್ತೆ ಹಚ್ಚಲು ಘಟನೆ ನಡೆದ ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿಯನ್ನು ಪೊಲೀಸರು ಪರಿಶೀಲಿಸಿದ್ದರು. ಆರೋಪಿ ದೀಪಾಂಶು 2018ರ ಬ್ಯಾಚಿನವರಾಗಿದ್ದು, ಸಬ್ ಇನ್‌ಸ್ಪೆಕ್ಟರ್ ಹುದ್ದೆಯಲ್ಲಿದ್ದರು.

ಹರ್ಯಾಣ ಮೂಲದ ಪ್ರೀತಿ ದಿಲ್ಲಿಯಲ್ಲಿ ರೋಹಿಣಿ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ದೀಪಾಂಶು ಅವರು ಪ್ರೀತಿಯನ್ನು ಪ್ರೀತಿಸುತ್ತಿದ್ದರು. ಆದರೆ, ಪ್ರೀತಿ ಇದಕ್ಕೆ ಒಪ್ಪಿರಲಿಲ್ಲ. ದೀಪಾಂಶು ಅವರ ಮದುವೆಯ ಪ್ರಸ್ತಾವವನ್ನು ಪ್ರೀತಿ ತಿರಸ್ಕರಿಸಿದ್ದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News