ಸಿಎಎ, ಎನ್ಆರ್ ಸಿ ವಿರೋಧಿ ಸ್ಟೇಟಸ್ ಹಾಕಿದ ವಿದ್ಯಾರ್ಥಿಗೆ ಹಲ್ಲೆ: ವಿಚಾರಿಸಲು ಬಂದ ತಂದೆಯ ಮೇಲೂ ದೌರ್ಜನ್ಯ

Update: 2020-02-08 14:51 GMT

ಪುತ್ತೂರು: ಸಿಎಎ, ಎನ್ ಆರ್ ಸಿ ವಿರುದ್ಧ ಮೊಬೈಲ್ ನಲ್ಲಿ ಸ್ಟೇಟಸ್ ಹಾಕಿದ್ದ ವಿದ್ಯಾರ್ಥಿಯೊಬ್ಬನಿಗೆ ವಿದ್ಯಾರ್ಥಿಗಳ ತಂಡವೊಂದು ಹಲ್ಲೆ ನಡೆಸಿದ್ದು, ಈ ಬಗ್ಗೆ ವಿಚಾರಿಸಲು ಹೋದ ವಿದ್ಯಾರ್ಥಿಯ ತಂದೆಯ ಮೇಲೂ ಹಲ್ಲೆ ನಡೆಸಿದ ಘಟನೆ ಪುತ್ತೂರಿನ ವಿವೇಕಾನಂದ ಕಾಲೇಜಿನ ಬಳಿಯಲ್ಲಿ ನಡೆದಿದೆ. ಕಾಲೇಜಿನಲ್ಲಿ ಪ್ರಾಂಶುಪಾಲರ ಜೊತೆ ಮಾತನಾಡಲು ತೆರಳಿದ್ದ ವಿದ್ಯಾರ್ಥಿಯ ತಂದೆ ಮತ್ತು ಸಹೋದರ ಸಂಬಂಧಿಗೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಮೂಲತ: ಚಿಕ್ಕಮಗಳೂರು ನಿವಾಸಿ ಪುತ್ತೂರಿನಲ್ಲಿ ವಾಸವಾಗಿರುವ ಯಾಕೂಬ್ (50) ಅವರ ಪುತ್ರ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಟೊಮೊಬೈಲ್ ಪ್ರಥಮ ವರ್ಷ ಕಲಿಯುತ್ತಿರುವ ರಿಝಾ ಹಸನ್ (16) ಮತ್ತು ಆತನ ಸಹೋದರ ಸಂಬಂಧಿ ತಸ್ರೀಫ್ (16) ಹಲ್ಲೆಗೊಳಗಾದವರು.

ಗಾಯಾಳುಗಳನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು,  ಬಳಿಕ ಗಂಭೀರ ಗಾಯಗೊಂಡಿರುವ ರಿಝಾ ಹಸನ್ ಮತ್ತು ತಸ್ರೀಫ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾಕೂಬ್ ಅವರು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಿಝಾ ಹಸನ್ ಅವರು ಇತ್ತೀಚೆಗೆ ಅಡ್ಯಾರ್ ಕಣ್ಣೂರಿನಲ್ಲಿ ನಡೆದ ಎನ್ ಆರ್ ಸಿ, ಸಿಎಎ ವಿರುದ್ಧ ನಡೆದಿದ್ದ ಪ್ರತಿಭಟನೆಯ ದೃಶ್ಯವನ್ನು ತನ್ನ ಮೊಬೈಲ್ ಸ್ಟೇಟಸ್‍ ನಲ್ಲಿ ಹಾಕಿಕೊಂಡಿದ್ದು, ಇದನ್ನು ಆಕ್ಷೇಪಿಸಿ ಗುರುವಾರ ಮಧ್ಯಾಹ್ನ ವಿವೇಕಾನಂದ ಕಾಲೇಜ್‍ ನ ಕೆಲವು ವಿದ್ಯಾರ್ಥಿಗಳು ಆತನ ಮೇಲೆ ಹಲ್ಲೆ ನಡೆಸಿದ್ದರು. ಇದನ್ನು ವಿಚಾರಿಸಲೆಂದು ಯಾಕೂಬ್ ಮತ್ತು ತಸ್ರೀಫ್ ಶನಿವಾರ ಮಧ್ಯಾಹ್ನ ರಿಝಾ ಹಸನ್ ಜೊತೆಗೆ ಕಾಲೇಜ್‍ ಗೆ ಬಂದಿದ್ದು, ಪ್ರಾಂಶುಪಾಲರ ಜೊತೆ ಈ ಬಗ್ಗೆ ಮಾತನಾಡಿದ್ದರು. ಇದನ್ನು ಗಮನಿಸಿದ ಹಲ್ಲೆ ಕೃತ್ಯದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳು ಮತ್ತೆ ರಿಝಾ ಹಸನ್ ಮತ್ತು ತಸ್ರೀಫ್ ಮೇಲೆ ಹಲ್ಲೆ ನಡೆಸಿದ್ದರು. ವಿಷಯ ತಿಳಿಯುತ್ತಲೇ ಯಾಕೂಬ್ ಅವರು ಪ್ರಾಂಶುಪಾಲರಿಗೆ ವಿಷಯ ತಿಳಿಸಿದ್ದು, ಪ್ರಾಂಶುಪಾಲರನ್ನು ಸ್ಥಳಕ್ಕೆ ಕರೆದುಕೊಂಡು ಬಂದಿದ್ದಾರೆ. ಪ್ರಾಂಶುಪಾಲರು ಸ್ಥಳಕ್ಕೆ ಆಗಮಿಸಿ ಹಲ್ಲೆ ನಡೆಸದಂತೆ ಹೇಳಿದ್ದರೂ ವಿದ್ಯಾರ್ಥಿಗಳು ಹಲ್ಲೆಯನ್ನು ಮುಂದುವರಿಸಿದ್ದಾರೆ. ಈ ಸಂದರ್ಭ ತನಗೂ ಹಲ್ಲೆ ನಡೆಸಿದ್ದಾರೆ ಎಂದು ಯಾಕೂಬ್ ದೂರಿನಲ್ಲಿ ತಿಳಿಸಿದ್ದಾರೆ.

ಪಿಎಫ್‍ಐ ಪ್ರತಿಭಟನೆ, ಖಂಡನೆ

ಪುತ್ತೂರು ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಶನಿವಾರ ಸಂಜೆ ಪಿಎಫ್‍ಐ ವತಿಯಿಂದ ಪ್ರತಿಭಟನೆ ನಡೆಸಿ ಹಲ್ಲೆ ಪ್ರಕರಣವನ್ನು ಖಂಡಿಸಲಾಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಪಿಎಫ್‍ಐ ಜಿಲ್ಲಾಧ್ಯಕ್ಷ ಜಾಬಿರ್ ಅರಿಯಡ್ಕ ವಿವೇಕಾನಂದ ಕಾಲೇಜ್‍ನಲ್ಲಿ ಅಲ್ಪ ಸಂಖ್ಯಾತರನ್ನು ಗುರಿಯಾಗಿರಿಸಿ ಕೋಮು ಪ್ರಚೋದಕ ದೌರ್ಜನ್ಯ, ದಬ್ಬಾಳಿಕೆಗಳು ನಿರಂತರವಾಗಿ ನಡೆಯುತ್ತಿದ್ದು, ಆದರೆ ಪೊಲೀಸ್ ಇಲಾಖೆ ಈ ಬಗ್ಗೆ ಯಾವುದೇ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ತಕ್ಷಣವೇ ಇಲಾಖೆ ಹಲ್ಲೆಗೈದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ನ್ಯಾಯಕ್ಕಾಗಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಡಿವೈಎಸ್‍ಪಿ ದಿನಕರ ಶೆಟ್ಟಿ ಅವರು ಹಲ್ಲೆಗೈದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳಲಾಯಿತು.

ಪ್ರಕರಣದ ಬಗ್ಗೆ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News