ಪಂಪ್‌ವೆಲ್ ಮೇಲ್ಸೇತುವೆಯಿಂದ ಬಿದ್ದ ಕಾರು: ಅಪಘಾತದಲ್ಲಿ ಓರ್ವ ಮೃತ್ಯು; ಇಬ್ಬರು ಗಂಭೀರ
ಮಂಗಳೂರು, ಫೆ.8: ಪಂಪ್‌ವೆಲ್ ಮೇಲ್ಸೇತುವೆಯಲ್ಲಿ ನಿಯಂತ್ರಣ ತಪ್ಪಿದ ಕಾರು ಬಿದ್ದು ಸಂಭವಿಸಿದ ಅಪಘಾತದಲ್ಲಿ ವ್ಯಕ್ತಿಯೋರ್ವ ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ಸಂಜೆ ನಡೆದಿದೆ. ಕಾಮಗಾರಿ ವಿಳಂಬದಿಂದಲೇ ಸದಾ ಸುದ್ದಿಯಲ್ಲಿದ್ದ ಪಂಪ್‌ವೆಲ್ ಮೇಲ್ಸೇತುವೆ ಉದ್ಘಾಟನೆಗೊಂಡು ವಾರ ಕಳೆಯುವುದರಲ್ಲೇ ಮೊದಲ ಅಪಘಾತ ಸಂಭವಿಸಿದೆ.
ಸ್ವಾಗತ್ ಗ್ಯಾರೇಜ್‌ನ ಮುಖ್ಯಸ್ಥ ಪ್ರವೀಣ್ ಫೆರ್ನಾಂಡಿಸ್ (45) ಅಪಘಾತದಲ್ಲಿ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ವಿವರ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಂತೂರು ಕಡೆಯಿಂದ ಉಳ್ಳಾಲ ಕಡೆಗೆ ಮಾರುತಿ ಆಲ್ಟೋ 800 ಕಾರು ಸಂಜೆ 5 ಗಂಟೆ ಸುಮಾರಿಗೆ ತೆರಳುತ್ತಿತ್ತು. ವೇಗದಲ್ಲಿದ್ದ ಆಲ್ಟೋ ಕಾರು ಇಂಡಿಯಾನ ಆಸ್ಪತ್ರೆಯ ಮುಂಭಾಗ ತಲುಪುತ್ತಿದ್ದಂತೆಯೇ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು, ನಂತರ ಉಳ್ಳಾಲ ಕಡೆಯಿಂದ ನಂತೂರು ಕಡೆಗೆ ತೆರಳುತ್ತಿದ್ದ ಕಾರಿಗೆ ಮತ್ತೆ ಢಿಕ್ಕಿಯಾಗಿದೆ. ಪರಿಣಾಮ ಆಲ್ಟೊ ಕಾರು ಮೇಲ್ಸೇತುವೆಯಿಂದ ಪಕ್ಕದ ಸರ್ವಿಸ್ ರಸ್ತೆಗೆ ಎರಡು ಬಾರಿ ಪಲ್ಟಿಯಾಗಿದೆ.
ಉಳ್ಳಾಲ ಕಡೆಯಿಂದ ಡಸ್ಟರ್ ಕಾರನ್ನು ನಂತೂರು ಸಮೀಪದ ತಾರೆತೋಟದ ಗ್ಯಾರೇಜ್‌ವೊಂದಕ್ಕೆ ಸರ್ವಿಸ್‌ಗೆಂದು ಚಲಾಯಿಸಿಕೊಂಡು ಹೋಗಲಾಗುತ್ತಿತ್ತು. ಕಾರಿನಲ್ಲಿದ್ದ ಪ್ರವೀಣ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದವು. ಇವರನ್ನು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇನ್ನು ಇಬ್ಬರ ಸ್ಥಿತಿ ಗಂಭೀರ ಇದೆ. ಆಲ್ಟೋ ಕಾರಿನ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.