ಫೆ.10: ರಾಷ್ಟ್ರೀಯ ಜಂತುಹುಳ ನಿವಾರಣಾ ದಿನ
ಉಡುಪಿ, ಫೆ.8: ಜಿಲ್ಲೆಯಲ್ಲಿ ಫೆ.10ರಂದು ರಾಷ್ಟ್ರೀಯ ಜಂತುಹುಳ ನಿವಾರಣಾ ದಿನವಾಗಿ ಆಚರಿಸಲಾಗುತ್ತಿದೆ. 1ರಿಂದ 19 ವರ್ಷದೊಳಗಿನ ಮಕ್ಕಳಲ್ಲಿ ಜಂತುಹುಳ ಕಾಣಿಸಿಕೊಳ್ಳುತ್ತಿರುವುದರಿಂದ 1ರಿಂದ 19 ವರ್ಷ ದೊಳಗಿನ ಎಲ್ಲಾ ಮಕ್ಕಳಿಗೆ ಅಲ್‌ಬೆಂಡಾಜೋಲ್ ಮಾತ್ರೆಯನ್ನು ಉಚಿತವಾಗಿ ನೀಡಲಾಗುತ್ತದೆ.
ಈ ಮಾತ್ರೆಯನ್ನು ಮಧ್ಯಾಹ್ನ ಊಟದ ನಂತರ ಶಾಲೆಗಳಲ್ಲಿ ಶಾಲಾ ಶಿಕ್ಷಕರ ಮತ್ತು ಅಂಗನವಾಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಉಪಸ್ಥಿತಿಯಲ್ಲಿ ನೀಡಲಾಗುವುದು. ಶಿಕ್ಷಕರು, ಬಿಸಿಯೂಟ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ಕೂಡಾ ಮಾತ್ರೆ ಯನ್ನು ನೀಡಲಾಗುತ್ತದೆ.
ಹೊಟ್ಟೆ ಹುಳುಗಳ ತೊಂದರೆಯಿಂದ ರಕ್ತಹೀನತೆ, ಪೌಷ್ಟಿಕಾಹಾರದ ಕೊರತೆ ಉಂಟಾಗುತ್ತಿದ್ದು, ದೈಹಿಕ ಹಾಗೂ ಮಾನಸಿಕ ತೊಂದರೆ ಕಾಣಿಸಿಕೊಳ್ಳಬಹುದು. ಅಲ್‌ಬೆಂಡಾಜೋಲ್ ಮಾತ್ರೆ ನೀಡುವುದರಿಂದ ಹೊಟ್ಟೆ ಹುಳುಗಳು ನಾಶವಾಗುತ್ತವೆ.
ಈ ಕಾರ್ಯಕ್ರಮದಲ್ಲಿ ಸರಕಾರಿ, ಅನುದಾನಿತ, ಖಾಸಗಿ ಶಾಲೆ, ರೆಸಿಡೆನ್ಶಿಯಲ್ ಸ್ಕೂಲ್, ಐಟಿಐ, ನರ್ಸಿಂಗ್ ಕಾಲೇಜ್, ಕೇಂದ್ರೀಯ ನವೋದಯ ಶಾಲೆ ಮತ್ತು ಪದವಿ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಆಯಾಯ ಶಾಲೆ/ಕಾಲೇಜುಗಳಲ್ಲಿ ಮಾತ್ರೆಗಳನ್ನು ನೀಡಲಾಗುತ್ತದೆ. ಅಂಗನವಾಡಿ ಮಕ್ಕಳಿಗೆ ಮತ್ತು ಶಾಲೆಯಿಂದ ಹೊರಗುಳಿದ 19 ವರ್ಷದೊಳಗಿನ ಮಕ್ಕಳಿಗೆ ಅಂಗನವಾಡಿಗಳಲ್ಲಿ ಅಲ್‌ಬೆಂಡಾಜೋಲ್ ಮಾತ್ರೆಗಳನ್ನು ವಿತರಣೆ ಮಾಡಲಾಗುತ್ತದೆ.
1ರಿಂದ 2 ವರ್ಷದೊಳಗಿನ ಮಕ್ಕಳಿಗೆ ಅರ್ಧಮಾತ್ರೆ ಹಾಗೂ 2ರಿಂದ 19 ವರ್ಷದ ವಯಸ್ಸಿನವರಿಗೆ ಇಡೀ ಮಾತ್ರೆ ನೀಡಲಾಗುತ್ತದೆ. ಚಿಕ್ಕ ಮಕ್ಕಳಿಗೆ ಮಾತ್ರೆಯನ್ನು ಹುಡಿ ಮಾಡಿ ನೀರಿನೊಂದಿಗೆ ಸೇವಿಸಲು ಅಥವಾ ಚೀಪಿ ಸೇವಿಸುವಂತೆ ಕ್ರಮ ವಹಿಸಲು ತರಬೇತಿ ನೀಡಲಾಗಿದೆ.
ಫೆ.10ರಂದು ಬಿಟ್ಟು ಹೋದ ಮಕ್ಕಳಿಗೆ, ಫೆ.17ರಂದು ಮಾತ್ರೆಗಳನ್ನು ನೀಡಲಾಗುವುದು. ಸೌಖ್ಯವಿಲ್ಲದ ಮಕ್ಕಳಿಗೆ ಗುಣಮುಖರಾದ ನಂತರ ಅಂದರೆ ಫೆ.17ರೊಳಗೆ ಅಲ್‌ಬೆಂಡಾಜೋಲ್ ಮಾತ್ರೆ ನೀಡಲಾಗುತ್ತದೆ. ಬೇರೆ ಯಾವುದೇ ಔಷಧಿ ಸೇವಿಸುತಿದ್ದರೆ ವೈದ್ಯರ ಸಲಹೆ ಪಡೆದು ಅಲ್‌ಬೆಂಡಾಜೋಲ್ ಮಾತ್ರೆಯನ್ನು ಸೇವಿಸಬೇಕು. ಆಶಾ ಕಾರ್ಯಕರ್ತೆಯರ ಮೂಲಕ ಶಾಲೆಯಿಂದ ಹೊರಗಿರುವ 1ರಿಂದ 19ವರ್ಷದೊಳಗಿರುವ ಮಕ್ಕಳನ್ನು ಪಟ್ಟಿ ಮಾಡಿ ಪಟ್ಟಿಯಲ್ಲಿರುವ ಎಲ್ಲಾ ಮಕ್ಕಳನ್ನು ಅಂಗನವಾಡಿಗೆ ಬರುವಂತೆ ಮಾಡಿ ಮಾತ್ರೆ ನೀಡಲಾಗುತ್ತದೆ.
1ರಿಂದ 19 ವರ್ಷದೊಳಗಿನ ತಾಲೂಕುವಾರು ಅಂದಾಜು ಮಕ್ಕಳ ಸಂಖ್ಯೆ :ಜಿಲ್ಲೆಯಲ್ಲಿ 1ರಿಂದ 19 ವರ್ಷದೊಳಗಿನ ಒಟ್ಟು 2,68,828 ಮಕ್ಕಳಿದ್ದು, ಉಡುಪಿ ತಾಲೂಕಿನಲ್ಲಿ 1,28,744, ಕುಂದಾಪುರ ತಾಲೂಕಿನಲ್ಲಿ 89,690 ಮತ್ತು ಕಾರ್ಕಳ ತಾಲೂಕಿನಲ್ಲಿ 50,394 ಮಕ್ಕಳಿದ್ದಾರೆ.
ಜಂತುಹುಳ ಬಾಧೆಯಿಂದ ಮಕ್ಕಳ ಶಿಕ್ಷಣ ಮತ್ತು ಭವಿಷ್ಯದ ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳುಂಟಾಗುತ್ತವೆ. ಜಂತುಹುಳ ಬಾಧೆಯಿಂದಾಗಿ ಮಕ್ಕಳು ಹೆಚ್ಚಾಗಿ ರೋಗಗ್ರಸ್ಥರಾಗಿ ಶಾಲೆಗಳಿಗೆ ಗೈರು ಹಾಜರಾಗುತ್ತಾರೆ ಅಥವಾ ತರಗತಿಯಲ್ಲಿ ಪಾಠದ ಮೇಲೆ ಏಕಾಗ್ರತೆ ನೀಡಲು ವಿಫಲರಾಗುತ್ತಾರೆ. ಮಕ್ಕಳ ಶಾರೀರಿಕ ಹಾಗೂ ಬೌದ್ಧಿಕ ಬೆಳವಣಿಗೆ ಕುಂಠಿತವಾಗಿ ವಿಷ್ಯದಲ್ಲಿ ಅವರ ಕೆಲಸ ಮಾಡುವ ಸಾಮರ್ಥ್ಯ ಕಡಿಮೆಯಾಗಬಹುದು.
ನೈರ್ಮಲ್ಯತೆಯ ಕೊರತೆ ಹಾಗೂ ವೈಯಕ್ತಿಕ ಶುಚಿತ್ವದ ಕೊರತೆ, ಜಂತುಹುಳ ಸೋಂಕಿನ ಮಣ್ಣನ್ನು ಸ್ಪರ್ಶಿಸುವುದರಿಂದ ಜಂತುಹುಳ ಬಾಧೆ ಕಾಣಿಸಿಕೊಳ್ಳುತ್ತದೆ. ಯಾವ ಮಕ್ಕಳಲ್ಲಿ ಜಂತುಹುಳ ಸಂಖ್ಯೆ ಹೆಚ್ಚಿದೆಯೋ, ಆ ಮಕ್ಕಳಲ್ಲಿ ಆಗಾಗ ಹೊಟ್ಟೆನೋವು, ಭೇದಿ, ಹಸಿವಿಲ್ಲದಿರುವುದು ಹಾಗೂ ಸುಸ್ತು ಇಂತಹ ಲಕ್ಷಣಗಳು ಕಂಡುಬರುತ್ತವೆ. ಜಂತುಹುಳ ಸಂಖ್ಯೆ ಕಡಿಮೆ ಇದ್ದವರಲ್ಲಿ ಯಾವುದೇ ತೊಂದರೆಗಳು ಕಾಣಿಸದಿರಲೂಬಹುದು.
ನಿವಾರಣೋಪಾಯ: ರಕ್ತಹೀನತೆ ತಡೆಗಟ್ಟುವುದು, ಪೌಷ್ಟಿಕತೆಯಲ್ಲಿ ಸುಧಾರಣೆ, ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು, ಏಕಾಗ್ರತೆ, ಕಲಿಕೆಯ ಶಕ್ತಿ ಹಾಗೂ ಶಾಲಾ ಹಾಜರಾತಿ ಸುಧಾರಿಸುವುದು. ಜಂತು ಹುಳ ಬಾಧೆಯಿಂದ ರಕ್ಷಿಸಿಕೊಳ್ಳಲು ಉಗುರುಗಳನ್ನು ಚಿಕ್ಕದಾಗಿ ಕತ್ತರಿಸಿ ಶುಚಿ ಯಾಗಿಡುವುದು, ಊಟ/ತಿಂಡಿ ಮಾಡುವ ಮೊದಲು ಹಾಗೂ ಶೌಚಾಲಯ ಬಳಸಿದ ನಂತರ ಕೈಗಳನ್ನು ಸಾಬೂನಿನಿಂದ ತೊಳೆಯುವುದು. ಆಹಾರ ಪದಾರ್ಥಗಳನ್ನು ಮುಚ್ಚಿಡುವುದು, ಶುದ್ಧೀಕರಿಸಿದ ನೀರನ್ನೇ ಕುಡಿಯುವುದು.
ಹಣ್ಣು ಹಂಪಲು, ತರಕಾರಿಗಳನ್ನು ಉಪಯೋಗಿಸುವ ಮುನ್ನ ಶುದ್ಧ ನೀರಿ ನಿಂದ ತೊಳೆಯುವುದು, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಡುವುದು. ಮಲವಿಸರ್ಜನೆಗೆ ಶೌಚಾಲಯವನ್ನೇ ಬಳಸುವುದು, ನಡೆಯುವಾಗ ಪಾದರಕ್ಷೆ ಗಳನ್ನು ಬಳಸುವುದರಿಂದ ಜಂತುಹುಳ ಬಾದೆಯಿಂದ ರಕ್ಷಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಾಷ್ಟ್ರೀಯ ಜಂತುಹುಳ ನಿವಾರಣಾ ಕಾರ್ಯಕ್ರಮದ ಅಧ್ಯಕ್ಷರಾದ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.