×
Ad

ಕೂಳೂರು ‘ಕಮಾನು ಸೇತುವೆ’ ದುರಸ್ತಿ ಹಿನ್ನೆಲೆ: ಫೆ.20ರಿಂದ ಸಂಚಾರ ನಿಷೇಧಕ್ಕೆ ಹೆದ್ದಾರಿ ಇಲಾಖೆ ಪ್ರಸ್ತಾವನೆ

Update: 2020-02-08 22:24 IST

ಮಂಗಳೂರು, ಫೆ.8: ರಾ.ಹೆ.66ರ ಕೂಳೂರುವಿನಲ್ಲಿ ಲ್ಗುಣಿ ನದಿಗೆ ಅಡ್ಡವಾಗಿ ಕಟ್ಟಿರುವ ಹಳೆಯ ಕಮಾನು ಸೇತುವೆಯನ್ನು ದುರಸ್ತಿ ಮಾಡಲು ಮುಂದಾಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಫೆ.20ರಿಂದ ಈ ಸೇತುವೆಯಲ್ಲಿ ಸಂಚಾರ ನಿಷೇಧಿಸಬೇಕು ಎಂದು ಜಿಲ್ಲಾಡಳಿತಕ್ಕೆ ಪತ್ರ ಬರೆದು ಪ್ರಸ್ತಾವಿಸಿದೆ.

ಸುಮಾರು 68 ವರ್ಷ ಹಳೆಯ ಈ ಕಮಾನು ಸೇತುವೆ ದುರಸ್ತಿ ಕಾಮಗಾರಿಗೆ ಹೆದ್ದಾರಿ ಪ್ರಾಧಿಕಾರವು ಪ್ರಸ್ತಾವಿಸಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಸಂಚಾರಿ ಪೊಲೀಸರ ಉಪಸ್ಥಿತಿಯಲ್ಲಿ ಸಭೆ ನಡೆಸಿ ಸಂಚಾರ ಸ್ಥಗಿತದ ಬಗ್ಗೆ ದಿನಾಂಕ ನಿಗದಿಪಡಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಕೂಳೂರಿನಲ್ಲಿ ಈಗ ಇರುವ ಎರಡೂ ಸೇತುವೆಗಳ ಮಧ್ಯೆ ಹೊಸದಾಗಿ 6 ಲೇನ್‌ನ 66 ಕೋ.ರೂ. ವೆಚ್ಚದ ನೂತನ ಸೇತುವೆ ನಿರ್ಮಾಣದ ಪ್ರಸ್ತಾವವು ಪ್ರಸ್ತುತ ಎನ್‌ಎಚ್‌ಎಐ ಪ್ರಧಾನ ಕಚೇರಿಯಲ್ಲಿದೆ. ಆದರೆ ಅದಕ್ಕೆ ಇನ್ನೂ ಅನುಮೋದನೆ ಸಿಕ್ಕಿಲ್ಲ. ಇನ್ನು ಅನುಮೋದನೆಯಾಗಿ ಕಾಮಗಾರಿ ಪೂರ್ಣಗೊಳ್ಳಲು 2-3 ವರ್ಷ ಬೇಕಾದುದರದಿಂದ ಅಲ್ಲಿಯವರೆಗೆ ಹಾಲಿ ಕಮಾನು ಸೇತುವೆಯನ್ನು ದುರಸ್ತಿಪಡಿಸಲು ಹೆದ್ದಾರಿ ಪ್ರಾಧಿಕಾರವು ಮುಂದಾಗಿದೆ. ಇದು ಸುಮಾರು 38 ಲಕ್ಷ ರೂ. ವೆಚ್ಚದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.

ಕಾಮಗಾರಿ ನಡೆಯುವ ಸಂದರ್ಭ ಪ್ರಯಾಣಿಕರಿಗೆ ಪ್ರಾಧಿಕಾರವು ಪರ್ಯಾಯ ವ್ಯವಸ್ಥೆಗೆ ಆದ್ಯತೆ ನೀಡಲಿದೆ. ಹಾಗಾಗಿ ಉಡುಪಿ ಕಡೆಯಿಂದ ಬರುವ ವಾಹನಗಳು ಕಮಾನು ಸೇತುವೆಗೆ ಮೊದಲೇ ಬಲಕ್ಕೆ ತಿರುಗಿ ಕೂಳೂರು ಹೊಸ ಸೇತುವೆಯಲ್ಲಿ ಸಂಚರಿಸಿ, ಬಳಿಕ ಎಡಕ್ಕೆ ಹಾಕಿರುವ ಹೊಸ ಸಂಪರ್ಕ ರಸ್ತೆಯಲ್ಲಿ ತೆರಳಿ ಮೇಲ್ಸೇತುವೆ ಮೂಲಕ ಸಾಗಬೇಕು. ಅದಕ್ಕಾಗಿ ಅಯ್ಯಪ್ಪ ದೇವಸ್ಥಾನದ ಬಳಿ ಮಧ್ಯೆ ಡಾಮರು ಹಾಕಿ ವ್ಯವಸ್ಥೆ ಮಾಡಲಾಗುತ್ತಿದೆ.

‘ಅಪಾಯಕಾರಿ’ ಅಂದಿದ್ದ ಸೇತುವೆಗೆ ‘ದುರಸ್ಥಿ’!

ಭೂಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಹೈದರಾಬಾದ್‌ನ ‘ಮೆಸರ್ಸ್ ಆರ್ವಿ ಅಸೋಸಿಯೇಟ್ಸ್’ ಎಂಬ ಏಜೆನ್ಸಿ ನೇಮಕ ಮಾಡಿ ಎಂಬಿಐವಿ ಯಂತ್ರದ ಮೂಲಕ ಈಗಿನ ಹಳೆಯ ಕಮಾನು ಸೇತುವೆಯ ಮೇಲ್ಭಾಗ, ಕೆಳಭಾಗವನ್ನು ತಪಾಸಣೆ, ದಾಖಲೆ ಹಾಗೂ ಮಾದರಿಯನ್ನು ಪರಿಶೀಲಿಸಿ ‘ಸಂಚಾರಕ್ಕೆ ಅನರ್ಹ’ ಎಂದು ರಾ.ಹೆ.ಪ್ರಾಧಿಕಾರಕ್ಕೆ 2018ರಲ್ಲಿ ವರದಿ ನೀಡಿತ್ತು. ಭಾರತ್‌ಮಾಲಾ ಯೋಜನೆ ಬಗ್ಗೆ ಸರ್ವೆ ನಡೆಸುತ್ತಿರುವ ತಜ್ಞರ ತಂಡ ಕೂಡ ಹಳೆಯ ಸೇತುವೆ ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂದಿತ್ತು. ಹಾಗಾಗಿ ಇದರಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಬೇಕು ಎಂದು ರಾ.ಹೆ. ಪ್ರಾಧಿಕಾರವು ದ.ಕ. ಜಿಲ್ಲಾಡಳಿತಕ್ಕೆ ವರದಿ ನೀಡಿತ್ತು. ಈ ಸೇತುವೆಯ ಮೇಲೆ ಸಂಚಾರ ನಿರ್ಬಂಧ ಮಾಡುವ ಬಗ್ಗೆ ಕಳೆದ ವರ್ಷ ಅಂದಿನ ಜಿಲ್ಲಾಧಿಕಾರಿ ಸಶಿಕಾಂತ್ ಸೆಂಥಿಲ್ ಪ್ರಕಟಿಸಿದ್ದರು. ಆದರೂ ಅದು ಜಾರಿಯಾಗಿರಲಿಲ್ಲ. ಆದರೆ ಪ್ರಸ್ತುತ ಎಂದಿನಂತೆ ಲಘು ಹಾಗೂ ಘನವಾಹನಗಳು ಈ ಸೇತುವೆಯ ಮೇಲೆ ಸಂಚರಿಸುತ್ತಿವೆ.

ಕೂಳೂರುವಿನ ಹಳೇ ಕಮಾನು ಸೇತುವೆಯ ದುರಸ್ತಿ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಕೆಲವು ದಿನ ಸಂಚಾರ ನಿಷೇಧಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಜಿಲ್ಲಾಡಳಿತಕ್ಕೆ ಪತ್ರ ಬಂದಿದೆ. ಸಂಚಾರ ಬದಲಾವಣೆಗೆ ಕ್ರಮ ಕೈಗೊಳ್ಳಬೇಕಾದ ಕಾರಣದಿಂದ ಕೆಲವೇ ದಿನದಲ್ಲಿ ಸಂಚಾರಿ ಪೊಲೀಸರ ಜತೆಗೆ ಸಭೆ ನಡೆಸಿ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆಗಳನ್ನು ಸಿದ್ದಪಡಿಸಿ ಸೂಕ್ತ ದಿನಾಂಕವನ್ನು ತಿಳಿಸಲಾಗುವುದು ಎಂದು ದ.ಕ.ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News