ಉಳ್ಳಾಲದಲ್ಲಿ ‘ನದಿ ದಂಡೆ ಯಾತ್ರೆ’ ಕಾರ್ಯಕ್ರಮ
ಮಂಗಳೂರು, ಫೆ.8: ಉಳ್ಳಾಲ ನದಿ ತೀರದ ಸಂಪನ್ಮೂಲಗಳನ್ನು ಸಂರಕ್ಷಿಸಿ, ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಉಳ್ಳಾಲ ಉಳಿಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ನಾಗರಿಕರನ್ನು ಒಳಗೊಂಡ ‘ಪರಿಸರ ಸಂರಕ್ಷಣಾ ನಾಗರಿಕ ಒಕ್ಕೂಟ’ ಹಮ್ಮಿಕೊಂಡಿರುವ ‘ನದಿ ಸಂರಕ್ಷಣಾ ಅಭಿಯಾನ 2020’ದ ಅಂಗವಾಗಿ ನದಿ ಪರಿಸರದ ಪ್ರಸಕ್ತ ಸ್ಥಿತಿಗತಿಯ ಬಗ್ಗೆ ಅಧ್ಯಯನ ನಡೆಸಲು ರೋಶನಿ ನಿಲಯದ ವಿದ್ಯಾರ್ಥಿಗಳೊಂದಿಗೆ ‘ನದಿ ದಂಡೆಯಾತ್ರೆ ಎಂಬ ವಿನೂತನ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.
ನದಿ ತೀರದಲ್ಲಿ ಕಾಲ್ನಡಿಗೆಯಲ್ಲಿ ಸಾಗುವುದರೊಂದಿಗೆ ಪರಿಸರ ರಕ್ಷಣೆಗೆ ಪೂರಕವಾದ ಹಾಡುಗಳು, ಘೋಷಣೆ ಸ್ಥಳೀಯ ಹಿರಿಯರಿಂದ ಮಾಹಿತಿ, ಸಲಹೆಗಳನ್ನು ಪಡೆಯುತ್ತಾ, ನದಿ ತಟದ ನಿವಾಸಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯವೂ ನಡೆಯಿತು.
ಉಳ್ಳಾಲ ನಗರಸಭೆಯ ಮಾಜಿ ಉಪಾಧ್ಯಕ್ಷೆ ರಝಿಯಾ ಇಬ್ರಾಹಿಂ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಿಚರ್ಡ್ ಡಿಸೋಜ ಪ್ರಾರ್ಥನೆ ಸಲ್ಲಿಸಿದರು. ಅಬ್ದುಲ್ ಖಾದರ್ ಯು.ಕೆ.ಮಾತನಾಡಿದರು. ಒಕ್ಕೂಟದ ಸಂಚಾಲಕ ಮಂಗಳೂರು ರಿಯಾಝ್ ಸ್ವಾಗತಿಸಿದರು.