ಎನ್‌ಐಟಿಕೆ: ಅವೈಜ್ಞಾನಿಕ ಡಿವೈಡರ್‌ನಿಂದ ರಸ್ತೆ ಅಪಘಾತ ಹೆಚ್ಚಳ; ಸಾರ್ವಜನಿಕರ ಆರೋಪ
ಮಂಗಳೂರು, ಫೆ.8: ಎನ್‌ಐಟಿಕೆ ಬಳಿ ರಾ.ಹೆ.66ರಲ್ಲಿ ಅಳವಡಿಸಲಾದ ಅಪಾಯಕಾರಿ ರೋಡ್ ಡಿವೈಡರ್‌ನಿಂದಾಗಿ ರಸ್ತೆ ಅಪಘಾತದಲ್ಲಿ ಹೆಚ್ಚಳವಾಗಿದೆ ಎಂಬ ಆರೋಪ ಸ್ಥಳೀಯ ಸಾರ್ವಜನಿಕರಿಂದ ಕೇಳಿ ಬಂದಿದೆ. ಈ ಹಿಂದೆ ಹಲವು ಬಾರಿ ಸ್ಥಳೀಯರ ಒತ್ತಾಯಕ್ಕೆ ಮಣಿದು ಇದನ್ನು ಮುಚ್ಚಿಸಲಾಗಿತ್ತು. ಆದರೆ ರಾಜಕೀಯ ಒತ್ತಡಕ್ಕೆ ಮಣಿದ ಅಧಿಕಾರಿಗಳು ಮತ್ತೆ ಇಲ್ಲಿ ರೋಡ್ ಡಿವೈಡರ್ ಅಳವಡಿಸಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಎನ್‌ಐಟಿಕೆ ಬಳಿಯ ಹೋಟೆಲೊಂದರ ಎದುರಿನಲ್ಲಿಯೇ ಈ ಅಪಾಯಕಾರಿ ಡಿವೈಡರ್ ಇದೆ. ಇಲ್ಲಿನ ಅಪಾಯವನ್ನು ಅರಿತು ಹೆದ್ದಾರಿ ಇಲಾಖೆಯು ಸ್ಥಳೀಯರ ಒತ್ತಡಕ್ಕೆ ಮಣಿದು ಎರಡು ಬಾರಿ ಡಿವೈಡರ್‌ನ್ನು ಮುಚ್ಚಿತ್ತು. ಆದರೆ ವ್ಯಕ್ತಿಯೊಬ್ಬರು ರಾಜಕೀಯ ಒತ್ತಡ ಹಾಕಿ ಮತ್ತೆ ಡಿವೈಡರ್ ಅಳವಡಿಸಿದ್ದಾರೆ. ಈಗಾಗಲೇ ಈ ಡಿವೈಡರ್‌ನಿಂದಾಗಿ ಹಲವು ಅಪಘಾತಗಳಾಗಿವೆ. ಹಾಗಿದ್ದರೂ ಈ ಡಿವೈಡರ್‌ನ್ನು ಹೆದ್ದಾರಿ ಇಲಾಖೆಯು ಅಳವಡಿಸಿದ್ದರೂ ಸಾರಿಗೆ, ಪೊಲೀಸ್, ಜಿಲ್ಲಾಡಳಿತದ ವೌನದ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.
ಟೋಲ್ ಸೋರಿಕೆ: ಈ ಡಿವೈಡರ್‌ನಿಂದ ದೊಡ್ಡ ಪ್ರಮಾಣದಲ್ಲಿ ಟೋಲ್ ಸೋರಿಕೆಯೂ ಆಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಅಂದರೆ ಈ ಬಗ್ಗೆ ಮಾಹಿತಿಯುಳ್ಳವರು ಕಿರಿದಾದ ಪಡ್ರೆ ರಸ್ತೆಯ ಮೂಲಕ ಸಾಗುತ್ತಾರೆ. ಅಪಾಯಕಾರಿಯಾದ ಡಿವೈಡರ್ ಮತ್ತು ಪಡ್ರೆ ರಸ್ತೆಯಲ್ಲಿ ಸಾಗುವುದ ರಿಂದ ಪರಿಸ್ಥಿತಿ ಮತ್ತಷ್ಟು ಸಂಕೀರ್ಣವಾಗಿದೆ. ಟೋಲ್ ನಷ್ಟವಾಗುತ್ತಿದ್ದರೂ ಡಿವೈಡರ್ ಮುಚ್ಚಲು ಹೆದ್ದಾರಿ ಅಧಿಕಾರಿಗಳು ಮೌನ ತಾಳುತ್ತಿರುವ ಬಗ್ಗೆಯೂ ಸಂಶಯ ವ್ಯಕ್ತವಾಗಿದೆ.