2ನೇ ಏಕದಿನ: ಭಾರತ ವಿರುದ್ಧ ನ್ಯೂಝಿಲ್ಯಾಂಡ್ ಗೆ ರೋಚಕ ಜಯ, ಸರಣಿ ಕೈವಶ

Update: 2020-02-08 18:36 GMT

ಆಕ್ಲೆಂಡ್, ಫೆ.8: ನ್ಯೂಝಿಲ್ಯಾಂಡ್ ತಂಡ ಎರಡನೇ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಭಾರತ ವಿರುದ್ಧ 22 ರನ್‌ಗಳ ರೋಚಕ ಜಯ ದಾಖಲಿಸಿತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಕೈವಶ ಮಾಡಿಕೊಂಡಿದೆ. ಮಾತ್ರವಲ್ಲ 5 ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿನ ಹೀನಾಯ ಸೋಲಿಗೆ ಸೇಡು ತೀರಿಸಿಕೊಂಡಿದೆ. ವಿರಾಟ್ ಕೊಹ್ಲಿ ಪಡೆ ಕಳಪೆ ಹೊಡೆತಗಳ ಆಯ್ಕೆಗೆ ತಕ್ಕ ಬೆಲೆ ತೆತ್ತಿದೆ.

ಶನಿವಾರ ಇಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಝಿಲ್ಯಾಂಡ್ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 273 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತ 48.3 ಓವರ್‌ಗಳಲ್ಲಿ 251 ರನ್‌ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು.

ಈ ಗೆಲುವಿನ ಮೂಲಕ ನ್ಯೂಝಿಲ್ಯಾಂಡ್ ತಂಡ ಭಾರತದ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿತು. ಕಳೆದ ವರ್ಷ ಮ್ಯಾಂಚೆಸ್ಟರ್‌ನಲ್ಲಿ ನಡೆದ ವಿಶ್ವಕಪ್‌ನ ಸೆಮಿ ಫೈನಲ್ ಪಂದ್ಯದಲ್ಲಿ ಕಿವೀಸ್ ಪಡೆ ಜಯ ಸಾಧಿಸಿತ್ತು. ಖಾಯಂ ನಾಯಕ ಕೇನ್ ವಿಲಿಯಮ್ಸನ್, ಪ್ರಮುಖ ಬೌಲರ್‌ಗಳಾದ ಟ್ರೆಂಟ್ ಬೌಲ್ಟ್ ಹಾಗೂ ಫರ್ಗ್ಯುಸನ್ ಅನುಪಸ್ಥಿತಿಯಲ್ಲೂ ನ್ಯೂಝಿಲ್ಯಾಂಡ್‌ನ ಪ್ರದರ್ಶನ ಗಮನಾರ್ಹವಾಗಿದೆ.

ಆರಡಿ, 8 ಇಂಚು ಎತ್ತರದ ಕೈಲ್ ಜೇಮಿಸನ್ ತನ್ನ ಚೊಚ್ಚಲ ಪಂದ್ಯದಲ್ಲಿ ಆಲ್‌ರೌಂಡ್ ಪ್ರದರ್ಶನ(2-42 ಹಾಗೂ ಔಟಾಗದೆ 25 ರನ್) ನೀಡಿ ತಂಡದ ಗೆಲುವಿಗೆ ಕಾಣಿಕೆ ನೀಡಿದರು. ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ರವೀಂದ್ರ ಜಡೇಜ(55ರನ್, 73 ಎಸೆತ)ಹಾಗೂ ನವದೀಪ್ ಸೈನಿ(45 ರನ್,49 ಎಸೆತ)8ನೇ ವಿಕೆಟ್ ಜೊತೆಯಾಟದಲ್ಲಿ 76 ರನ್ ಸೇರಿಸಿ ತಂಡದ ಗೆಲುವಿಗಾಗಿ ವಿಫಲ ಯತ್ನ ನಡೆಸಿದರು. ಭಾರತದ ಪರ ಸರ್ವಾಧಿಕ ಸ್ಕೋರ್ ಗಳಿಸಿದ ಜಡೇಜ(55)ವಿಕೆಟನ್ನು ಪಡೆದ ನೀಶಾಮ್ ಭಾರತ ಇನಿಂಗ್ಸ್‌ಗೆ ತೆರೆ ಎಳೆದರು.

ಟಿಮ್ ಸೌಥಿ ಹೊಸ ಚೆಂಡಿನಲ್ಲಿ ಉತ್ತಮ ಬೌಲಿಂಗ್(10 ಓವರ್‌ಗಳಲ್ಲಿ 2-41)ಸಂಘಟಿಸಿದರು. ನಾಯಕ ವಿರಾಟ್ ಕೊಹ್ಲಿ(15)ಹಾಗೂ ಕೇದಾರ್ ಜಾಧವ್(9)ವಿಕೆಟನ್ನು ಉರುಳಿಸಿದರು.

ಅನನುಭವಿ ಆರಂಭಿಕ ಆಟಗಾರರಾದ ಮಾಯಾಂಕ್ ಅಗರ್ವಾಲ್(3) ಹಾಗೂ ಪೃಥ್ವಿ ಶಾ(24)ಸತತ ಎರಡನೇ ಬಾರಿ ತಂಡಕ್ಕೆ ಉತ್ತಮ ಆರಂಭ ಒದಗಿಸಲು ವಿಫಲರಾದರು. ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಅರ್ಧಶತಕ(52, 57 ಎಸೆತ, 7 ಬೌಂಡರಿ,1ಸಿಕ್ಸರ್)ಸಿಡಿಸಿ ತಂಡವನ್ನು ಆಧರಿಸಲು ಯತ್ನಿಸಿದರು. ಕಿವೀಸ್‌ನ ಪರ ಸೌಥಿ, ಜೇಮಿಸನ್(2-42), ಗ್ರಾಂಡ್‌ಹೋಮ್(2-54) ಹಾಗೂ ಬೆನ್ನೆಟ್(2-58)ತಲಾ ಎರಡು ವಿಕೆಟ್‌ಗಳನ್ನು ಪಡೆದರು.

 ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಝಿಲ್ಯಾಂಡ್ ಆರಂಭಿಕ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್(79, 79 ಎಸೆತ)ಹಾಗೂ ಮಧ್ಯಮ ಕ್ರಮಾಂಕದ ಆಟಗಾರ ರಾಸ್ ಟೇಲರ್(ಔಟಾಗದೆ 73, 74 ಎಸೆತ)ಬಿರುಸಿನ ಬ್ಯಾಟಿಂಗ್ ನೆರವಿನಿಂದ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ಯಶಸ್ವಿಯಾಯಿತು.

ಏಕದಿನ ಕ್ರಿಕೆಟ್‌ನಲ್ಲಿ 51ನೇ ಅರ್ಧಶತಕ ಸಿಡಿಸಿದ ಟೇಲರ್ ಅವರು ಜೇಮಿಸನ್(ಔಟಾಗದೆ 25, 24 ಎಸೆತ)ಅವರೊಂದಿಗೆ 9ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 76 ರನ್ ಸೇರಿಸಿ ಕಿವೀಸ್ 8 ವಿಕೆಟ್ ನಷ್ಟಕ್ಕೆ 273 ರನ್ ಗಳಿಸಲು ನೆರವಾದರು.

ಎಸೆತಕ್ಕೊಂದು ರನ್ ಗಳಿಸಿದ ಗಪ್ಟಿಲ್(79,79 ಎಸೆತ, 8 ಬೌಂಡರಿ,3ಸಿಕ್ಸರ್) ನಿಕೊಲ್ಸ್(41, 59 ಎಸೆತ)ಅವರೊಂದಿಗೆ ಮೊದಲ ವಿಕೆಟ್‌ಗೆ 93 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. 17ನೇ ಓವರ್‌ನಲ್ಲಿ ನಿಕೊಲ್ಸ್ ವಿಕೆಟ್ ಉರುಳಿಸಿದ ಯಜುವೇಂದ್ರ ಚಹಾಲ್ ಈ ಜೋಡಿಯನ್ನು ಬೇರ್ಪಡಿಸಿದರು.

 ಬ್ಲಂಡೆಲ್(22)ವಿಕೆಟನ್ನು ಕಬಳಿಸಿದ ಶಾರ್ದೂಲ್ ಠಾಕೂರ್(2-60)ಕಿವೀಸ್ ರನ್ ವೇಗಕ್ಕೆ ಕಡಿವಾಣ ಹಾಕಿದರು. ಗಪ್ಟಿಲ್ ಅವರು ಠಾಕೂರ್ ಅವರ ನೇರ ಎಸೆತಕ್ಕೆ ರನೌಟಾದರು. ಆಗ ಕಿವೀಸ್‌ನ ಸ್ಕೋರ್ 3 ವಿಕೆಟ್ ನಷ್ಟಕ್ಕೆ 157.

ರವೀಂದ್ರ ಜಡೇಜ(1-35)ಅವರು ಟಾಮ್ ಲಥಾಮ್(7)ವಿಕೆಟನ್ನು ಉರುಳಿಸಿದರು. ಕಾಲಿನ್ ಡಿ ಗ್ರಾಂಡ್‌ಹೋಮ್(5)ಠಾಕೂರ್‌ಗೆ ವಿಕೆಟ್ ಒಪ್ಪಿಸಿದರು. ಆಗ ನ್ಯೂಝಿಲ್ಯಾಂಡ್ 200ರ ಗಡಿ ದಾಟುವುದು ಅನುಮಾನವಾಗಿತ್ತು. ಟಿಮ್ ಸೌಥಿ ವಿಕೆಟ್ ಪಡೆದ ಲೆಗ್ ಸ್ಪಿನ್ನರ್ ಚಹಾಲ್ 58 ರನ್‌ಗೆ 3 ವಿಕೆಟ್ ಪಡೆದರು.

ಟೇಲರ್ 61 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಪಾದಾರ್ಪಣೆ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ ಜೇಮಿಸನ್ 35 ಎಸೆತಗಳಲ್ಲಿ 50 ರನ್ ಜೊತೆಯಾಟ ನಡೆಸಿದರು.

ಭಾರತದ ಪರ ಸ್ಪಿನ್ನರ್ ಯಜುವೇಂದ್ರ ಚಹಾಲ್(3-58)ಹಾಗೂ ವೇಗಿ ಶಾರ್ದೂಲ್ ಠಾಕೂರ್(2-60)ಐದು ವಿಕೆಟ್‌ಗಳನ್ನು ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News