ಇವಿಎಂಗಳ ಅಕ್ರಮ ಸಾಗಾಟ ಆರೋಪ: ವಿಡಿಯೋಗಳನ್ನು ಪೋಸ್ಟ್ ಮಾಡಿದ ಆಮ್ ಆದ್ಮಿ

Update: 2020-02-09 17:54 GMT

ಹೊಸದಿಲ್ಲಿ: ದಿಲ್ಲಿ ವಿಧಾನಸಭೆಯಲ್ಲಿ ಬಳಸಲಾದ ಇವಿಎಂಗಳನ್ನು ತಿರುಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಆಮ್ ಆದ್ಮಿ ಪಕ್ಷವು ಆರೋಪಿಸಿದ್ದು, ಈ ಕುರಿತ ವಿಡಿಯೋಗಳನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದೆ.

ಇವಿಎಂಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಆರೋಪಿಸಿರುವ ಪಕ್ಷದ ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್, ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ.

"ಮೀಸಲು ಪಡೆ ಇವಿಎಂ ಜೊತೆ ಹೋಗಿಲ್ಲವೇ? ಬದಾರ್ ಪುರ ವಿಧಾನಸಭಾ ಕ್ಷೇತ್ರದ ಸರಸ್ವತಿ ವಿದ್ಯಾ ನಿಕೇತನ ಶಾಲೆಯಲ್ಲಿ ಇವಿಎಂ ಜೊತೆಗಿದ್ದ ಈ ಅಧಿಕಾರಿಯನ್ನು ಜನರು ಹಿಡಿದಿದ್ದಾರೆ" ಎಂದು ಟ್ವೀಟ್ ಮಾಡಿರುವ ಅವರು ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಅವರು ಪೋಸ್ಟ್ ಮಾಡಿರುವ ಇನ್ನೊಂದು ವಿಡಿಯೋದಲ್ಲಿ ಇವಿಎಂಗಳನ್ನು ಬೀದಿಯೊಂದರಲ್ಲಿ ಕೆಲವರು ಹಿಡಿದುಕೊಂಡು ನಡೆಯುತ್ತಿರುವುದು ಕಾಣಿಸುತ್ತದೆ. "ಈ ಇವಿಎಂಗಳನ್ನು ಎಲ್ಲಿಗೆ ಸಾಗಿಸಲಾಗುತ್ತಿದೆ ಎಂದು ಚುನಾವಣಾ ಆಯೋಗ ತನಿಖೆ ನಡೆಸಲಿ" ಎಂದವರು ಹೇಳಿದ್ದಾರೆ.

ಆದರೆ ಈ ಆರೋಪಗಳನ್ನು ಚುನಾವಣಾ ಆಯೋಗವು ನಿರಾಕರಿಸಿದೆ. ಮತದಾನಕ್ಕೆ ಬಳಸಲಾದ ಎಲ್ಲಾ ಇವಿಎಂಗಳನ್ನು ಪಕ್ಷಗಳ ಏಜೆಂಟರ ಎದುರಲ್ಲೇ ಸೀಲ್ ಮಾಡಲಾಗಿದ್ದು, ಮತದಾನ ಕೇಂದ್ರದಿಂದ ನೇರವಾಗಿ ಸ್ಟ್ರಾಂಗ್ ರೂಂಗೆ ಒಯ್ಯಲಾಗಿದೆ ಎಂದು ಅದು ಹೇಳಿದೆ.

ಹಲವೆಡೆ ಇವಿಎಂಗಳನ್ನು ಅಕ್ರಮವಾಗಿ ಸಾಗಿಸಲು ಅಧಿಕಾರಿಗಳು ಪ್ರಯತ್ನಿಸಿದ ಬಗ್ಗೆ ಮಾಹಿತಿ ಲಭಿಸಿದೆ. ಇವಿಎಂಗಳನ್ನು ಸೀಲ್ ಮಾಡಿ ನೇರವಾಗಿ ಸ್ಟ್ರಾಂಗ್ ರೂಂಗೆ ರವಾನಿಸಬೇಕು. ಆದರೆ ಇಲ್ಲಿ ಇವು ಅಧಿಕಾರಿಗಳ ಬಳಿ ಹೇಗೆ ಬಂದಿವೆ ಎಂದು ಸಂಜಯ್ ಸಿಂಗ್ ಪ್ರಶ್ನಿಸಿದ್ದಾರೆ. ಈ ಮಧ್ಯೆ, ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ಚುನಾವಣಾ ತಂತ್ರಗಾರಿಕೆ ತಜ್ಞ ಪ್ರಶಾಂತ್ ಕಿಶೋರ್ ಹಾಗೂ ಪಕ್ಷದ ಹಿರಿಯ ಸದಸ್ಯರ ಜೊತೆ ಸಭೆ ನಡೆಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮತಯಂತ್ರಗಳ ಸುರಕ್ಷತೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.

ಆದರೆ ಆರೋಪವನ್ನು ನಿರಾಕರಿಸಿರುವ ಚುನಾವಣಾ ಆಯೋಗ, ಪಕ್ಷದ ಏಜೆಂಟರ ಸಮ್ಮುಖದಲ್ಲೇ ಇವಿಎಂಗಳನ್ನು ಸೀಲ್ ಮಾಡಿ, ಸ್ಟ್ರಾಂಗ್ ರೂಂನಲ್ಲಿ ಪೊಲೀಸ್ ಭದ್ರತೆಯಲ್ಲಿ ಇಡಲಾಗಿದೆ. ರಾಜಕೀಯ ಪಕ್ಷದ ಏಜೆಂಟರು ಈ ಕೋಣೆಯ ಹೊರಗಡೆ ಇರಲೂ ಅವಕಾಶ ನೀಡಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಹೇಳಿದ್ದಾರೆ.

ಮತ ಎಣಿಕೆ ಮಂಗಳವಾರ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News