ಯುವ ರಾಜಕಾರಣಿಗಳಿಗೆ ಅಮರನಾಥ ಶೆಟ್ಟರ ಆದರ್ಶಗಳು ಅನುಕರಣೀಯ: ಕುಮಾರಸ್ವಾಮಿ

Update: 2020-02-09 12:33 GMT

ಮೂಡುಬಿದಿರೆ:  ಅಮರನಾಥ ಶೆಟ್ಟಿ ರಾಜ್ಯ ರಾಜಕಾರಣ ಕಂಡ ಸರಳ, ಸಜ್ಜನಿಕೆಯ ಪರಿಶುದ್ಧ ರಾಜಕಾರಣಿಗಳಲ್ಲಿ ಒಬ್ಬರು. ಸ್ವಾರ್ಥಿಯಾಗದೇ ಸ್ವಹಿತ ಬಯಸದೇ ಜನ ಸೇವೆ ಮತ್ತು ಪಕ್ಷ ನಿಷ್ಠೆಗೆ ಬದ್ಧರಾದವರು. ಹಿರಾಜಕೀಯ ಜೀವನದಲ್ಲಿ ಅವರ ನಡೆ, ನುಡಿ, ಮಾರ್ಗದರ್ಶನ, ಹಲವು ವರ್ಷಗಳ ಬಾಂಧವ್ಯ ರಾಜಕೀಯ ಜೀವನದಲ್ಲಿ ನನಗೆ ಬಹಳಷ್ಟು ಬಾರಿ ಸ್ಫೂರ್ತಿ ತುಂಬಿದೆ. ಯುವ ರಾಜಕಾರಣಿಗಳಿಗೆ ಕೆ.ಅಮರನಾಥ ಶೆಟ್ಟರ ನಡೆ, ನುಡಿ ಮತ್ತು ಆದರ್ಶಗಳು ಅನುಕರಣೀಯ ಮಾದರಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಅವರು ರವಿವಾರ ಆಳ್ವಾಸ್ ನುಡಿಸಿರಿ ಸಭಾಂಗಣದಲ್ಲಿ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿಯವರ ಉತ್ತರ ಕ್ರಿಯೆಯ ಅಂಗವಾಗಿ ನಡೆದ ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಅಮರನಾಥ ಶೆಟ್ಟರು ಎಂದಿಗೂ ಅಧಿಕಾರವನ್ನು ಅರಸಿ ಹೋಗಲಿಲ್ಲ. ಅಧಿಕಾರ ಇಲ್ಲದಾಗಲೂ ಜನಸೇವೆಯಲ್ಲಿ ತೊಡಗಿಕೊಂಡವರು. ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅಮರನಾಥ ಶೆಟ್ಟರನ್ನು ಎಂಎಲ್‍ಸಿ ಮಾಡುವ ಪ್ರಯತ್ನವನ್ನು ಮಾಡಿದ್ದೆ ಆದರೆ ಆಂತರಿಕವಾದ ಕಲಹ ದಿಂದ ಬೆಂಬಲ ಸಿಗದೆ ಸಾಧ್ಯವಾಗಿರಲಿಲ್ಲ. ಆದರೆ ಈ ಬಗ್ಗೆ ಯಾವುದೇ ತಕರಾರು ಎತ್ತದೆ ಸದಾ ಪಕ್ಷದ ಜತೆಗಿದ್ದರು. ದೈಹಿಕ ಅನಾರೋಗ್ಯದ ಸಂದರ್ಭದಲ್ಲಿಯೂ ನಿರಂತರ ಪಕ್ಷದ ಹಾಗೂ ಜನರ ಏಳಿಗೆಗಾಗಿ ಅವರ ಹೃದಯ ಮಿಡಿಯುತ್ತಿತ್ತು. ಅವರ ಜನಪ್ರೀತಿ, ಸೇವೆ, ಮತ್ತು ಕಾಳಜಿಯ ಸ್ಫೂರ್ತಿಯನ್ನು  ಎಂದಿಗೂ ಹೃದಯದಲ್ಲಿರಿಸಿಕೊಂಡಿದ್ದೇನೆ ಎಂದವರು ಹೇಳಿದರು.

ಅಮನರಾಥ ಶೆಟ್ಟರು ನಿಷ್ಕಳಂಕ, ಜಾತ್ಯಾತೀತ ಮಾತ್ರವಲ್ಲ ಸದಾ ಜನಸೇವೆಯ ಮೂಲಕ ಕರ್ತವ್ಯಕ್ಕೆ ಆದ್ಯತೆ ನೀಡಿದವರು. ಅವರ ಸಾಧನೆಗಳು ಸ್ಮರಣೀಯ ಹೆಜ್ಜೆಯ ಗುರುತುಗಳು ಅನುಕರಣೀಯ.ಅವರ ಅಗಲುವಿಕೆಯಿಂದ ಮೂಡಬಿದಿರೆ ಅನಾಥ ಪ್ರಜ್ಞೆಯಲ್ಲಿದೆ. ಆದರೆ ಅವರೆಂದಿಗೂ ಜನತೆಯ ಹೃದಯದಲ್ಲಿ ಅಮರರಾಗಿರುತ್ತಾರೆ ಎಂದು ತೇಜಸ್ವಿನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಶಾಂತಾರಾಮ್ ಶೆಟ್ಟಿ ಹೇಳಿದರು.

ಲೋಕಾಯುಕ್ತ ನ್ಯಾ. ಪಿ.ವಿಶ್ವನಾಥ ಶೆಟ್ಟಿ, ವಿಧಾನ ಪರಿಷತ್ ಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಭೋಜೇ ಗೌಡ, ಕ್ಷೇತ್ರ ಶಾಸಕ ಉಮಾನಾಥ ಕೋಟ್ಯಾನ್, ಮಿಜಾರುಗುತ್ತು ಆನಂದ ಆಳ್ವ,  ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ, ಮಾಝಿ ಸಚಿವ ವಿನಯಕುಮಾರ್ ಸೊರಕೆ, ಬಿ.ನಾಗರಾಜ ಶೆಟ್ಟಿ, ಶಕುಂತಲಾ ಶೆಟ್ಟಿ, ಕೆ, ಅಭಯಚಂದ್ರ,  ಸದಾನಂದ ಶೆಟ್ಟಿ, ಎಂ.ಆರ್. ಪೂಂಜ, ಸಹಿತ ಗಣ್ಯರು, ಜನಪ್ರತಿನಿಧಿಗಳು, ಹಿರಿಯ ಪೋಲೀಸ್ ಅಧಿಕಾರಿಗಳು, ಇಲಾಖಾಧಿಕಾರಿಗಳು, ಅಭಿಮಾನಿಗಳು ನುಡಿನಮನದಲ್ಲಿ ಪಾಲ್ಗೊಂಡರು.

ಜಯಶ್ರೀ ಅಮರನಾಥ ಶೆಟ್ಟಿ, ಪುತ್ರಿಯರಾದ ಡಾ. ಅಮರಶ್ರೀ ಶೆಟ್ಟಿ, ಆಶ್ರಿತಾ ಶೆಟ್ಟಿ, ಅಳಿಯ ಪ್ರಶಾಂತ್ ಶೆಟ್ಟಿ, ಮೊಮ್ಮಕ್ಕಳು ಸಹಿತ ಬಂಧುವರ್ಗದವರು ಹಾಜರಿದ್ದರು. ಶ್ರದ್ಧಾಂಜಲಿ ಸಮಿತಿಯ ಪ್ರಮುಖರಾದ ಡಾ.ಎಂ. ಮೋಹನ ಆಳ್ವ ಸಹಿತ ಪ್ರಮುಖರು ಹಾಜರಿದ್ದರು. ಸಾಮೂಹಿಕ ಮೌನ ಪ್ರಾರ್ಥನೆ, ಪಾಲ್ಗೊಂಡವರಿಂದ ಪುಷ್ಪ ನಮನ ಸಲ್ಲಿಕೆ ಬಳಿಕ ಭೋಜನ ವ್ಯವಸ್ಥೆ ಮಾಡಲಾಗಿತ್ತು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News