×
Ad

ಮಾದಕ ವಸ್ತು ‘ಎಂಡಿಎಂಎ’ ವಶ: ಮೂವರ ಬಂಧನ, 51 ಲಕ್ಷ ರೂ. ಮೌಲ್ಯದ ಸೊತ್ತು ಸ್ವಾಧೀನ

Update: 2020-02-09 20:09 IST

ಮಂಗಳೂರು, ಫೆ. 9: ಮಾದಕ ವಸ್ತು ‘ಎಂಡಿಎಂಎ’ನ್ನು (Methylene dioxy methamphetamine) ಮಂಗಳೂರು ನಗರದಲ್ಲಿ ಮಾರಾಟಕ್ಕೆ ಯತ್ನಿಸಿದ ಆರೋಪದಲ್ಲಿ ಮೂವರನ್ನು ಮಂಗಳೂರು ಪೊಲೀಸರು ಮುಲ್ಕಿ ಸಮೀಪ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುರತ್ಕಲ್ ಚೊಕ್ಕಬೆಟ್ಟು ನಿವಾಸಿ ಮುಹಮ್ಮದ್ ಶರೀಫ್ ಸಿದ್ದೀಕ್ (40), ಕಾಟಿಪಳ್ಳ 2ನೇ ಬ್ಲಾಕ್ ನಿವಾಸಿಗಳಾದ ಮುಹಮ್ಮದ್ ಶಾಫಿ ಯಾನೆ ಚಪ್ಪಿ (33), ಮುಹಮ್ಮದ್ ಅನಸ್ (27) ಬಂಧಿತ ಆರೋಪಿಗಳು.

‘ಆರೋಪಿಗಳು ಮಾದಕ ವಸ್ತುವನ್ನು ಮುಂಬೈಯಿಂದ ಅಕ್ರಮವಾಗಿ ಖರೀದಿಸಿ ಮಂಗಳೂರಿಗೆ ಐಷಾರಾಮಿ ಕಾರೊಂದರಲ್ಲಿ ತರುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಮುಲ್ಕಿ ಬಳಿ ಕಾರನ್ನು ತಪಾಸಣೆ ಮಾಡಿದಾಗ ಮಾದಕ ವಸ್ತು ಇರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳಿಂದ 87,560 ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು, ಮೂರು ಮೊಬೈಲ್, ಸಾಗಾಟಕ್ಕೆ ಉಪಯೋಗಿಸಿದ ಐಷಾರಾಮಿ ಬಿಎಂಡಬ್ಲೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಸ್ವಾಧೀನಪಡಿಸಿಕೊಳ್ಳಲಾದ ಸೊತ್ತಿನ ಒಟ್ಟು ಮೌಲ್ಯ 51.12 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಹಲವು ಪ್ರಕರಣ: ಆರೋಪಿಗಳ ಪೈಕಿ ಮುಹಮ್ಮದ್ ಶರೀಫ್ ಸಿದ್ದೀಕ್ ಎಂಬಾತನ ವಿರುದ್ಧ ಈ ಹಿಂದೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತುವನ್ನು ಹೊಂದಿದ ಬಗ್ಗೆ ಪ್ರಕರಣ ದಾಖಲಾಗಿತ್ತು. ಆರೋಪಿ ಮುಹಮ್ಮದ್ ಶಾಫಿ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಹೊಂದಿದ ಬಗ್ಗೆ ಪ್ರಕರಣ ದಾಖಲಾಗಿವೆ. ಮತ್ತೋರ್ವ ಆರೋಪಿ  ಅನಸ್ ವಿರುದ್ಧ ಈ ಹಿಂದೆ ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ.ಎಸ್.ಹರ್ಷ ನಿರ್ದೇಶನದಂತೆ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಲಕ್ಷ್ಮೀ ಗಣೇಶ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ಸಿಸಿಬಿ ಘಟಕದ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಆರ್. ನಾಯ್ಕೆ, ಪಿಎಸ್ಸೈ ಕಬ್ಬಾಳ್‌ ರಾಜ್ ಮತ್ತು ಸಿಬ್ಬಂದಿ ಹಾಗೂ ಇಕನಾಮಿಕ್ ಮತ್ತು ನಾರ್ಕೋಟಿಕ್ ಪೊಲೀಸ್ ಠಾಣೆಯ ಪಿಎಸ್ಸೈ ಲತಾ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News