ಕಾಶ್ಮೀರ ಬಂದ್ ಕರೆ ಕುರಿತು ವರದಿ ಮಾಡಿದ್ದ ಪತ್ರಕರ್ತರಿಗೆ ವಿಚಾರಣೆಗೆ ಹಾಜರಾಗಲು ಸೂಚನೆ

Update: 2020-02-09 14:45 GMT

 ಶ್ರೀನಗರ, ಫೆ.9: ನಿಷೇಧಿತ ಪ್ರತ್ಯೇಕತಾವಾದಿ ಸಂಘಟನೆ ಜೆಕೆಎಲ್‌ಎಫ್ ಕರೆ ನೀಡಿದ ಕಾಶ್ಮೀರ ಬಂದ್ ಕುರಿತು ಪತ್ರಿಕೆಯಲ್ಲಿ ವರದಿ ಮಾಡಿದ ಇಬ್ಬರು ಪತ್ರಕರ್ತರನ್ನು ವಿಚಾರಣೆಗೆ ಹಾಜರಾಗುವಂತೆ ಜಮ್ಮು ಕಾಶ್ಮೀರದ ಪೊಲೀಸರು ಸೂಚಿಸಿದ್ದಾರೆ ಎಂದು ವರದಿಯಾಗಿದೆ.

ಅಪ್ಝಲ್ ಗುರು ಮತ್ತು ಮಕ್ಬೂಲ್ ಭಟ್‌ ಗಲ್ಲಿಗೇರಿಸಿದ ದಿನವಾದ ಫೆಬ್ರವರಿ 9ರಂದು ಕಾಶ್ಮೀರ ಕಣಿವೆಯಲ್ಲಿ ಬಂದ್ ಆಚರಣೆಗೆ ನಿಷೇಧಿತ ಪ್ರತ್ಯೇಕತಾವಾದಿ ಸಂಘಟನೆ ಜಮ್ಮು ಕಾಶ್ಮೀರ ಲಿಬರೇಷನ್ ಫ್ರಂಟ್(ಜೆಕೆಎಲ್‌ಎಫ್) ಕರೆ ನೀಡಿರುವ ವರದಿಯನ್ನು ಇಬ್ಬರು ಪತ್ರಕರ್ತರು ವರದಿ ಮಾಡಿದ್ದರು. ಈ ಬಗ್ಗೆ ಪ್ರಶ್ನಿಸಲು ಪತ್ರಕರ್ತರನ್ನು ಠಾಣೆಗೆ ಕರೆಸಲಾಗಿದೆ. ಅವರನ್ನು ಬಂಧಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

 ಆದರೆ ಪೊಲೀಸರ ಹೇಳಿಕೆಯನ್ನು ನಿರಾಕರಿಸಿರುವ ಜಮ್ಮು ಕಾಶ್ಮೀರ ಪತ್ರಕರ್ತರ ಸಂಘ, ಯಾವುದನ್ನು ವರದಿ ಮಾಡಬೇಕು, ಯಾವುದನ್ನು ವರದಿ ಮಾಡಬಾರದು ಎಂಬುದನ್ನು ಪೊಲೀಸರು ನಿರ್ಧರಿಸುತ್ತಿದ್ದಾರೆ. ಪೊಲೀಸರು ಪತ್ರಕರ್ತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಟೀಕಿಸಿದೆ. ಬಳಿಕ ಠಾಣೆಗೆ ತೆರಳಿದ ಪತ್ರಕರ್ತರು ಸಹೋದ್ಯೋಗಿಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.

ಯಾಸಿನ್ ಮಲಿಕ್ ನೇತೃತ್ವದ ಜೆಕೆಎಲ್‌ಎಫ್ ಸಂಘಟನೆಯನ್ನು ಕಳೆದ ವರ್ಷದ ಮಾರ್ಚ್‌ನಲ್ಲಿ ಕೇಂದ್ರ ಸರಕಾರ ನಿಷೇಧಿಸಿದ್ದು ಯಾಸಿನ್ ಮಲಿಕ್‌ ಬಂಧಿಸಿ ದಿಲ್ಲಿಯ ತಿಹಾರ್ ಜೈಲಿನಲ್ಲಿಡಲಾಗಿದೆ. ಜೆಕೆಎಲ್‌ಎಫ್ ವಿರುದ್ಧ 37 ಪ್ರಕರಣ ದಾಖಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News