×
Ad

ಕೊರೊನಾ ವೈರಸ್: ಉಡುಪಿಯ ಶಂಕಿತ ಮೂವರಲ್ಲಿಯೂ ಸೋಂಕು ಇಲ್ಲ

Update: 2020-02-09 20:24 IST

ಉಡುಪಿ, ಫೆ. 9: ಶಂಕಿತ ಕೊರೊನಾ ವೈರಸ್ ಪರೀಕ್ಷೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಮೂವರ ವೈದ್ಯಕೀಯ ವರದಿಯನ್ನು ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ವೈರಲ್ ಪತ್ತೆ ಪ್ರಯೋಗಾಲಯ (ವಿಡಿಎಲ್) ಇಂದು ಉಡುಪಿ ಜಿಲ್ಲಾಡಳಿತಕ್ಕೆ ನೀಡಿದ್ದು, ಈ ಮೂವರಲ್ಲಿ ಯಾವುದೇ ಸೋಂಕು ಇಲ್ಲ ಎಂಬುದಾಗಿ ವರದಿ ಧೃಢಪಡಿಸಿದೆ.

15-20 ದಿನಗಳ ಹಿಂದೆ ಚೀನದಿಂದ ಉಡುಪಿ ಜಿಲ್ಲೆಯ ಹುಟ್ಟೂರಿಗೆ ಮರಳಿ ಬಂದ ನಾಲ್ವರು, ಶಂಕಿತ ಕೊರೊನಾ ವೈರಸ್ ಪರೀಕ್ಷೆಗಾಗಿ ಫೆ.7ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು.

ಇವರಲ್ಲಿ ಯಾವುದೇ ವಿಧದ ರೋಗದ ಲಕ್ಷಣ ಗಳು ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಮಹಿಳೆಯನ್ನು ಫೆ.8ರಂದು ಮನೆಗೆ ಕಳುಹಿಸಲಾಗಿತ್ತು. ಉಳಿದಂತೆ ನಾಲ್ಕು ವರ್ಷದ ಹೆಣ್ಣು ಮಗು, 24 ವರ್ಷದ ಯುವಕ ಹಾಗೂ 40 ವರ್ಷದ ವ್ಯಕ್ತಿಯ ರಕ್ತ ಹಾಗೂ ಗಂಟಲ ದ್ರವವನ್ನು ಫೆ.7ರಂದು ಕೊರೊನಾ ವೈರಸ್ ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

‘ಬೆಂಗಳೂರಿನ ಪ್ರಯೋಗಾಲಯದಿಂದ ಈ ಮೂವರ ವೈದ್ಯಕೀಯ ವರದಿ ಇಂದು ಬಂದಿದ್ದು, ಇದರಲ್ಲಿ ನೆಗೆಟಿವ್ ಎಂಬುದು ತಿಳಿಸಲಾಗಿದೆ. ಆದುದರಿಂದ ಜಿಲ್ಲೆಯಲ್ಲಿ ಯಾವುದೇ ಕೊರೊನಾ ವೈರಸ್ ಪ್ರಕರಣಗಳು ಇಲ್ಲ. ಈ ಬಗ್ಗೆ ಸಾರ್ವಜನಿಕರು ಯಾವುದೇ ಆತಂಕ ಪಡಬೇಕಾದ ಅಗತ್ಯ ಇಲ್ಲ’ ಎಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ತೆರೆಯಲಾದ ಪ್ರತ್ಯೇಕ ವಾರ್ಡ್‌ನಲ್ಲಿ ದಾಖಲಾಗಿರುವ ಈ ಮೂವರ ಚಿಕಿತ್ಸೆ ಇಂದು ಕೂಡ ಮುಂದುವರೆಸಿದ್ದು, ಇವರ ವೈದ್ಯಕೀಯ ವರದಿ ಇಂದು ಸಂಜೆ ವೇಳೆ ಕೈಸೇರಿರುವುದರಿಂದ ಫೆ.10ರಂದು ಬೆಳಗ್ಗೆ ಈ ಮೂವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಮನೆಗೆ ಕಳುಹಿಸಿಕೊಡಲಾಗುವುದು’ ಎಂದು ಜಿಲ್ಲಾಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News