ಸಿಎಎ ವಿರೋಧಿ ಪ್ರತಿಭಟನೆ: ಅಪ್ರಾಪ್ತ ವಯಸ್ಕನನ್ನು 42 ದಿನ ಜೈಲಿನಲ್ಲೇ ಇರಿಸಿದ ಉ.ಪ್ರ. ಪೊಲೀಸರು
ಲಕ್ನೋ,ಫೆ.8: ಕಳೆದ ವರ್ಷದ ಡಿಸೆಂಬರ್ 19ರಂದು ನಗರದಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆ ವೇಳೆ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿ ಉತ್ತರಪ್ರದೇಶ ವಶಕ್ಕೆ ತೆಗೆದುಕೊಂಡಿದ್ದ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬ 42 ದಿನಗಳನ್ನು ಜೈಲಿನಲ್ಲಿ ಕಳೆದಿದ್ದಾನೆ. ಪೊಲೀಸರು ಆತನನ್ನು ಬಾಲಪುನರ್ವಸತಿ ಗೃಹಕ್ಕೆ ಕಳುಹಿಸುವ ಬದಲು ಜೈಲಿನಲ್ಲಿ ಇರಿಸಿರುವುದು ಬೆಳಕಿಗೆ ಬಂದಿದೆ.
ತಮ್ಮ ಕಾನೂನುಬಾಹಿರ ಕ್ರಮವನ್ನು ಮರೆಮಾಚಲು ಹಾಗೂ ಅಪ್ರಾಪ್ತ ವಯಸ್ಸನ್ನು ಜೈಲಿನಲ್ಲಿರಿಸುವುದಕ್ಕಾಗಿ ತನಗೆ 18 ವರ್ಷ ವಯಸ್ಸಾಗಿದೆಯೆಂದು ಹೇಳುವಂತೆ ಪೊಲೀಸರು ಆತನಿಗೆ ಒತ್ತಡ ಹಾಕಿದ್ದರು. ಭೀತಿಯಿಂದಾಗಿ ಬಾಲಕನು, ಪೊಲೀಸರು ಹೇಳಿದಂತೆ ನಡೆದುಕೊಂಡನೆಂದು ‘ಟೈಮ್ಸ್ ಆಫ್ ಇಂಡಿಯಾ’ ಆಂಗ್ಲ ದೈನಿಕ ವರದಿ ಮಾಡಿದೆ.
ಸಿಎಎ ವಿರೋಧಿ ಪ್ರತಿಭಟನೆ ಸಂದರ್ಭ ಅಪ್ರಾಪ್ತ ವಯಸ್ಕನು ಸೊತ್ತುಗಳಿಗೆ ಹಾನಿ ಮಾಡಿದ್ದರಿಂದ ಉಂಟಾದ ನಷ್ಟವನ್ನು ವಸೂಲಿ ಮಾಡಲು ಆದಿತ್ಯನಾಥ್ ಸರಕಾರವು ಕಳುಹಿಸಿದ ನೋಟಿಸ್‌ಗೆ ಉತ್ತರ ನೀಡಲು ಸಿದ್ಧತೆ ಮಾಡುತ್ತಿರುವುದಾಗಿ ಸಂತ್ರಸ್ತ ಬಾಲಕನ ವಕೀಲ ಹುಸೈನ್ ರಿಝ್ವಿ ತಿಳಿಸಿದ್ದಾರೆ.
ಅಪ್ರಾಪ್ತ ವಯಸ್ಸಿನ ಬಾಲಕನನ್ನು ಬಾಲ ನ್ಯಾಯ ಕಾಯ್ದೆಯಡಿ ವಿಚಾರಣೆಗೊಳಪಡಿಸದಿರುವ ಬಗ್ಗೆ ತನಿಖೆಗೆ ಆಗ್ರಹಿಸಿ, ನ್ಯಾಯವಾದಿ ರಿಝ್ವಿ ಅವರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಅಪ್ರಾಪ್ತ ವಯಸ್ಕನನ್ನು ಬಾಲಪರಾಧಿಗಳ ಪುನರ್ವಸತಿ ಗೃಹದಲ್ಲಿರಿಸುವ ಬದಲು ಜೈಲಿನಲ್ಲಿ ಯಾಕೆ ಇರಿಸಲಾಯಿತೆಂದು ಅವರು ಪತ್ರದಲ್ಲಿ ಪ್ರಶ್ನಿಸಿದ್ದಾರೆ. ಇಂತಹ ಕಾನೂನುಬಾಹಿರ ಕ್ರಮವನ್ನು ಎಸಗಿದ್ದಕ್ಕಾಗಿ ಹಝ್ರತ್‌ಗಂಜ್ ಠಾಣಾ ಪೊಲೀಸರನ್ನು ತನಿಖೆಗೆ ಒಳಬಪಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
‘‘ ಪೊಲೀಸರು ನನ್ನನ್ನು ಪೊಲೀಸ್ ಠಾಣೆಗೆ ಕರೆದೊಯ್ದರು ಹಾಗೂ ವಯಸ್ಸನ್ನು ಹೆಚ್ಚು ಮಾಡಿ ಹೇಳು ಎಂದು. ಹೀಗಾಗಿ ನಾನು ಭಯದಿಂದ ನನಗೆ 18 ವರ್ಷವೆಂದು ಹೇಳಿದ್ದೇನೆ ಎಂದು ಅಪ್ರಾಪ್ತ ವಯಸ್ಕ ಹೇಳಿದ್ದಾನೆಂದು ಆಂಗ್ಲ ದಿನಪತ್ರಿಕೆ ವರದಿಯಲ್ಲಿ ತಿಳಿಸಿದೆ.
ವ್ಯಕ್ತಿಯ ವಯಸ್ಸಿನ ತನಿಖೆ ನಡೆಸುವ ವಿಶೇಷಾಧಿಕಾರ ನಮಗಿಲ್ಲ. ಆರೋಪಿಯ ವಯಸ್ಸನ್ನು ನಿರ್ಧರಿಸುವುದು ನ್ಯಾಯಾಲಯಕ್ಕೆ ಸೇರಿದ್ದಾಗಿದೆ’’ ಎಂದು ಹಝ್ರತ್‌ಗಂಜ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಧೀರೇಂದ್ರ ಕುಶ್ವಾಹಾ ತಿಳಿಸಿದ್ದಾರೆ.
ಪೊಲೀಸರ ವಶದಲ್ಲಿರುವ ಅಪ್ರಾಪ್ತ ವಯಸ್ಸಿನ ಬಾಲಕನು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯವನಗಿದ್ದಾನೆ. ಕೊಲೆಯತ್ನ ಹಾಗೂ ಮಾರಕಾಸ್ತ್ರಗಳೊಂದಿಗೆ ಗಲಭೆ ನಡೆಸಿರುವುದು ಸೇರಿದಂತೆ ಆತನ ವಿರುದ್ಧ 15 ಆರೋಪಗಳನ್ನು ಪೊಲೀಸರು ಹೊರಿಸಿದ್ದಾರೆ.