ವಾಜಪೇಯಿ ಆಡಳಿತದಲ್ಲಿ ವಿಫಲಗೊಂಡಿತ್ತು ಎನ್‌ಆರ್‌ಸಿ ಯನ್ನು ಹೋಲುವ ಪೌರತ್ವ ನಿರ್ಧಾರದ ಯೋಜನೆ
► ಪೌರತ್ವ ಸಂಕೀರ್ಣ ವಿಷಯ ಎನ್ನುವ ಪಾಠ ಕಲಿಸಿದ್ದ ಯೋಜನೆ
ಹೊಸದಿಲ್ಲಿ,ಫೆ.9: ಈಗ ಭಾರೀ ಸದ್ದು ಮಾಡುತ್ತಿರುವ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯನ್ನೇ ಹೋಲುತ್ತಿದ್ದ,ಭಾರತೀಯ ಪ್ರಜೆಗಳಿಗೆ ವಿವಿಧೋದ್ದೇಶಿತ ರಾಷ್ಟ್ರೀಯ ಗುರುತಿನ ಚೀಟಿ (ಎಂಎನ್‌ಐಸಿ)ಗಳನ್ನು ನೀಡಲು ಪರೀಕ್ಷಾರ್ಥ ಯೋಜನೆಯೊಂದನ್ನು 2003ರಲ್ಲಿ ಆಗಿನ ಅಟಲ್ ಬಿಹಾರಿ ವಾಜಪೇಯಿ ಸರಕಾರವು ರೂಪಿಸಿತ್ತು. ಆದರೆ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಪ್ರಜೆಗಳ ಪೈಕಿ ಅರ್ಧಕ್ಕೂ ಕಡಿಮೆ ಜನರ ಪೌರತ್ವವನ್ನು ಸಾಬೀತುಗೊಳಿಸಲು ಈ ಯೋಜನೆಗೆ ಸಾಧ್ಯವಾಗಿತ್ತು. ಅಂದರೆ ಅರ್ಧಕ್ಕೂ ಹೆಚ್ಚಿನ ಜನರ ಪೌರತ್ವ ಸಾಬೀತಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ 2009ರಲ್ಲಿ ಈ ಯೋಜನೆಗೆ ಅಂತ್ಯ ಹಾಡಲಾಗಿತ್ತು. ಪೌರತ್ವ ನಿರ್ಣಯವು ಸಂಕೀರ್ಣ ಮತ್ತು ಜಟಿಲ ವಿಷಯವಾಗಿದೆ ಎಂಬ ಪಾಠವನ್ನು ಕಲಿಸಿದ್ದ ಈ ಪರೀಕ್ಷಾರ್ಥ ಯೋಜನೆಯು,ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ದಾಖಲೆಗಳ ಕೊರತೆಯಿದೆ ಎನ್ನುವುದನ್ನು ಬೆಟ್ಟು ಮಾಡಿತ್ತು. ಹೀಗಿದ್ದರೂ ದೇಶವ್ಯಾಪಿ ಎನ್‌ಆರ್‌ಸಿಯನ್ನು ನಡೆಸಲು ಎನ್‌ಡಿಎ ಸರಕಾರ ಮುಂದಾಗಿತ್ತು ಎನ್ನುವುದು ಗಮನಾರ್ಹವಾಗಿದೆ.
12 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 13 ಜಿಲ್ಲೆಗಳ ಆಯ್ದ ಪ್ರದೇಶಗಳ ಸುಮಾರು 30.95 ಲಕ್ಷ ಜನರನ್ನು ಎಂಎನ್‌ಐಸಿ ಪರೀಕ್ಷಾರ್ಥ ಯೋಜನೆಯಲ್ಲಿ ಸಮೀಕ್ಷೆಗೊಳಪಡಿಸಲಾಗಿತ್ತು. ಗೃಹ ವ್ಯವಹಾರಗಳ ಸಚಿವಾಲಯವು 44.36 ಕೋ.ರೂ.ವೆಚ್ಚದ ಈ ಯೋಜನೆಗೆ 2006,ಅಕ್ಟೋಬರ್‌ನಲ್ಲಿ ವಿಧ್ಯುಕ್ತ ಚಾಲನೆಯನ್ನು ನೀಡಿತ್ತು. ಮೇ 2007ರಿಂದ ಆರಂಭಿಸಿ ಯೋಜನೆಯು ಅಂತ್ಯಗೊಂಡ ಮಾರ್ಚ್ 31,2009ರವರೆಗೂ 12 ಲಕ್ಷಕ್ಕೂ ಅಧಿಕ ಎಂಎನ್‌ಐಸಿಗಳನ್ನು ವಿತರಿಸಲಾಗಿತ್ತು. ಅಂದರೆ ಸಮೀಕ್ಷೆಗೊಳಪಟ್ಟಿದ್ದ 30.95 ಲಕ್ಷ ಜನರಲ್ಲಿ ಕೇವಲ ಇಷ್ಟು ಜನರ ಪೌರತ್ವ ಸಾಬೀತಾಗಿತ್ತು.
ಪರೀಕ್ಷಾರ್ಥ ಯೋಜನೆಯ ಉಸ್ತುವಾರಿ ವಹಿಸಿದ್ದ ಕಾರ್ಯದರ್ಶಿಗಳ ಸಮಿತಿಯ ಸದಸ್ಯರೋರ್ವರು ಹೇಳಿರುವಂತೆ ಪೌರತ್ವವು ಅತ್ಯಂತ ಸಂಕೀರ್ಣ ಮತ್ತು ಜಟಿಲ ವಿಷಯವಾಗಿದೆ ಎನ್ನುವುದನ್ನು ಯೋಜನೆಯು ಬೆಳಕಿಗೆ ತಂದಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ವ್ಯಕ್ತಿಗಳ ಪೌರತ್ವವನ್ನು ನಿರ್ಧರಿಸಲು ದಸ್ತಾವೇಜುಗಳ ಕೊರತೆಯ ಸಮಸ್ಯೆ ಎದುರಾಗಿತ್ತು,ವಿಶೇಷವಾಗಿ ಕೃಷಿಕಾರ್ಮಿಕರು,ಭೂಹೀನ ಕಾರ್ಮಿಕರು,ವಿವಾಹಿತ ಮಹಿಳೆಯರು ಮತ್ತು ವ್ಯಕ್ತಿಗಳು ಸಮೀಕ್ಷೆಯ ಸಂದರ್ಭ ತಮ್ಮ ಮನೆಗಳಲ್ಲಿ ಲಭ್ಯರಿರಲಿಲ್ಲ.
ಈ ಯೋಜನೆ ಈಗಲೂ ಏಕೆ ಪ್ರಸಕ್ತ?
2003ರ ಪೌರತ್ವ ನಿಯಮಾವಳಿಗಳಂತೆ ರಾಷ್ಟ್ರವ್ಯಾಪಿ ಎನ್‌ಆರ್‌ಸಿಯು ಎಂಎನ್‌ಐಸಿ ವಿತರಣೆಯೊಂದಿಗೆ ನೇರವಾಗಿ ತಳುಕು ಹಾಕಿಕೊಂಡಿರುವುದರಿಂದ ಪರೀಕ್ಷಾರ್ಥ ಯೋಜನೆಯ ಫಲಿತಾಂಶವು ಮಹತ್ವವನ್ನು ಪಡೆದುಕೊಂಡಿದೆ. ಎನ್‌ಪಿಆರ್ ಭಾರತದ ಸಾಮಾನ್ಯ ನಿವಾಸಿಗಳ ಪಟ್ಟಿಯಾಗಿದ್ದು,ಎನ್‌ಆರ್‌ಸಿಯಲ್ಲಿ ಹೆಸರಿರುವವರನ್ನು ಮಾತ್ರ ಭಾರತೀಯ ಪ್ರಜೆಗಳೆಂದು ಪರಿಗಣಿಸಲಾಗುತ್ತದೆ ಮತ್ತು ಅವರಿಗೆ ಎಂಎನ್‌ಐಸಿಗಳನ್ನು ವಿತರಿಸಲಾಗುತ್ತದೆ.
ಪೌರತ್ವ ನಿರ್ಧಾರ ಪ್ರಕ್ರಿಯೆಯು ತೊಡಕಿನ,ಸಮಯವನ್ನು ತಿನ್ನುವ ಜಟಿಲ ಸ್ವರೂಪದ ವಿಷಯವಾಗಿದೆ ಎಂದು 2011ರಲ್ಲಿ ಆಗಿನ ಯುಪಿಎ ಸರಕಾರದ ಸಹಾಯಕ ಗೃಹ ಸಚಿವ ಗುರುದಾಸ ಕಾಮತ್ ಅವರೂ ಸಂಸತ್ತಿನಲ್ಲಿ ಒಪ್ಪಿಕೊಂಡಿದ್ದರು.
ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್)ಯಲ್ಲಿನ ಎಲ್ಲ ವ್ಯಕ್ತಿಗಳ ಪೌರತ್ವ ಸ್ಥಿತಿಗತಿಯನ್ನು ದೃಢಪಡಿಸಿಕೊಳ್ಳುವ ಮೂಲಕ ಭಾರತೀಯ ಪ್ರಜೆಗಳ ರಾಷ್ಟ್ರೀಯ ರಿಜಿಸ್ಟರ್ (ಎನ್‌ಆರ್‌ಐಸಿ) ಅನ್ನು ಸೃಷ್ಟಿಸಲು ಮತ್ತು ಎಲ್ಲ ಭಾರತೀಯ ಪ್ರಜೆಗಳಿಗೆ ರಾಷ್ಟ್ರೀಯ ಗುರುತು ಚೀಟಿಗಳನ್ನು ವಿತರಿಸಲು ತಾನು ನಿರ್ಧರಿಸಿದ್ದೇನೆ ಎಂದು ಎನ್‌ಡಿಎ ಸರಕಾರವು 2014,ಜುಲೈನಲ್ಲಿ ಸಂಸತ್ತಿನಲ್ಲಿ ಹೇಳಿತ್ತು. ಈ ವೇಳೆ ಎಂಎನ್‌ಐಸಿ ಪರೀಕ್ಷಾರ್ಥ ಯೋಜನೆಯನ್ನು ಉಲ್ಲೇಖಿಸಿದ್ದ ಅದು,1955ರ ಪೌರತ್ವ ಕಾಯ್ದೆ ಮತ್ತು 2003ರ ಪೌರತ್ವ ನಿಯಮಾವಳಿಗಳು ಈಗಾಗಲೇ ಪೌರತ್ವ ನಿರ್ಧಾರಕ್ಕೆ ಮಾರ್ಗಸೂಚಿಗಳನ್ನು ನಿಗದಿಗೊಳಿಸಿದ್ದು,ಪರೀಕ್ಷಾರ್ಥ ಯೋಜನೆಯಲ್ಲಿ ಇವುಗಳನ್ನು ಒರೆಗೆ ಹಚ್ಚಲಾಗಿದೆ ಎಂದು ತಿಳಿಸಿತ್ತು.
ಆದರೆ,ರಾಷ್ಟ್ರವ್ಯಾಪಿ ಎನ್‌ಆರ್‌ಸಿಯನ್ನು ನಡೆಸಲು ಈವರೆಗೂ ನಿರ್ಧರಿಸಲಾಗಿಲ್ಲ ಎಂದು ಸರಕಾರವು ಕಳೆದ ಸೋಮವಾರ ಸಂಸತ್ತಿನಲ್ಲಿ ತಿಳಿಸಿದೆ.
ಎಂಎನ್‌ಐಸಿ ಮತ್ತು ಎನ್‌ಆರ್‌ಸಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡದಿರುವ ಆಗಿನ ಯುಪಿಎ ಸರಕಾರದ ನಿರ್ಧಾರಕ್ಕೆ ಪರೀಕ್ಷಾರ್ಥ ಯೋಜನೆಯ ಫಲಿತಾಂಶವು ಕಾರಣವಾಗಿತ್ತು ಎಂದು ಪರಿಗಣಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. 2010ರಲ್ಲಿ ಎನ್‌ಪಿಆರ್ ಪ್ರಕ್ರಿಯೆ ನಡೆದಿತ್ತಾದರೂ ರಾಷ್ಟ್ರವ್ಯಾಪಿ ಎನ್‌ಆರ್‌ಸಿಯನ್ನು ಕೈಗೊಂಡಿರಲಾಗಿರಲಿಲ್ಲ. 2014-15ರಲ್ಲಿ ಅಸ್ಸಾಂ ಮತ್ತು ಮೇಘಾಲಯ ಹೊರತುಪಡಿಸಿ ರಾಷ್ಟ್ರಾದ್ಯಂತ ಎನ್‌ಪಿಆರ್‌ನ್ನು ಪರಿಷ್ಕರಿಸಲಾಗಿತ್ತು. ಈವರೆಗೆ ದೇಶದಲ್ಲಿಯ 119 ಕೋ.ಗೂ ಅಧಿಕ ಸಾಮಾನ್ಯ ನಿವಾಸಿಗಳ ವಿದ್ಯುನ್ಮಾನ ದತ್ತಾಂಶ ಕೋಶವನ್ನು ಸಿದ್ಧಪಡಿಸಲಾಗಿತ್ತು. ಈ ವರ್ಷ ಹೆಚ್ಚುವರಿ ಮಾಹಿತಿಗಳೊಂದಿಗೆ ಅದನ್ನು ಪರಿಷ್ಕರಿಸಲಾಗುತ್ತಿದೆ.