ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಿದ ಹೈದರಾಬಾದ್ ಮಹಾ ನಗರಪಾಲಿಕೆ

Update: 2020-02-09 17:39 GMT

ಹೈದರಾಬಾದ್,ಫೆ.9: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯನ್ನು ವಿರೋಧಿಸಿ ನಿರ್ಣಯ ಕೈಗೊಂಡಿರುವ ದೇಶದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಹೈದರಾಬಾದ್ ಪಾತ್ರವಾಗಿದೆ. ಟಿಆರ್‌ಎಸ್ ನೇತೃತ್ವದ ಬೃಹನ್ ಹೈದರಾಬಾದ್ ಮಹಾ ನಗರಪಾಲಿಕೆ (ಜಿಎಚ್‌ಎಂಸಿ)ಯು ಶನಿವಾರ ಸಿಎಎ ವಿರುದ್ಧ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ‘ಸಿಎಎ ವಿರುದ್ಧ ತೆಲಂಗಾಣ ಸರಕಾರದ ನಿಲುವನ್ನು ಬೆಂಬಲಿಸಲು ನಿರ್ಧರಿಸಲಾಗಿದೆ ’ಎಂದು ನಿರ್ಣಯದಲ್ಲಿ ಹೇಳಲಾಗಿದೆ.

150 ಸದಸ್ಯ ಬಲದ ಜಿಎಚ್‌ಎಂಸಿಯಲ್ಲಿ ಆಡಳಿತಾರೂಢ ಟಿಆರ್‌ಎಸ್ 99,ಅದರ ಮಿತ್ರಪಕ್ಷ ಅಸದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ 44, ಬಿಜೆಪಿ 4, ಕಾಂಗ್ರೆಸ್ 2 ಮತ್ತು ಟಿಡಿಪಿ 1 ಸ್ಥಾನಗಳನ್ನು ಹೊಂದಿವೆ.

ಮುಂದಿನ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಸಿಎಎ ವಿರುದ್ಧ ನಿರ್ಣಯವನ್ನು ಮಂಡಿಸುವ ಭರವಸೆ ನೀಡಿರುವುದಕ್ಕಾಗಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರಿಗೆ ನಿರ್ಣಯದಲ್ಲಿ ಧನ್ಯವಾದಗಳನ್ನು ಸಲ್ಲಿಸಲಾಗಿದೆ.

ವಿವಾದ ಸೃಷ್ಟಿ

ನಿರ್ಣಯವು ಎನ್‌ಪಿಆರ್ ಅನ್ನೂ ವಿರೋಧಿಸಿದೆ ಎಂದು ಒವೈಸಿ ಟ್ವೀಟಿಸಿದ ಬಳಿಕ ವಿವಾದವೊಂದು ಸೃಷ್ಟಿಯಾಗಿದೆ.

ನಿರ್ಣಯವು ಕೇವಲ ಸಿಎಎ ವಿರುದ್ಧವಾಗಿದೆಯೇ ಹೊರತು ಎನ್‌ಪಿಆರ್ ಅಥವಾ ಎನ್‌ಆರ್‌ಸಿ ವಿರುದ್ಧವಲ್ಲ. ಆ ಬಗ್ಗೆ ಸರಕಾರವು ನಿರ್ಧಾರ ಕೈಗೊಳ್ಳಬೇಕು ಎಂದು ಹೈದರಾಬಾದ್ ಮೇಯರ್ ಡಾ.ಬೊಂತು ರಾಮಮೋಹನ್ ತಿಳಿಸಿದರು.

ಒವೈಸಿ ಟ್ವೀಟ್‌ನಿಂದ ಅಂತರ ಕಾಯ್ದುಕೊಂಡ ಅವರು,ಅದು ಪ್ರತ್ಯೇಕ ಹೇಳಿಕೆಯಾಗಿದೆ ಮತ್ತು ನಿರ್ಣಯದ ಭಾಗವಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News