ಅಫ್ಘಾನ್ ಸೈನಿಕನಿಂದ ಗುಂಡಿನ ದಾಳಿ; ಇಬ್ಬರು ಅಮೆರಿಕ ಸೈನಿಕರ ಸಾವು

Update: 2020-02-09 16:28 GMT
ಸಾಂದರ್ಭಿಕ ಚಿತ್ರ

ಕಾಬೂಲ್ (ಅಫ್ಘಾನಿಸ್ತಾನ), ಫೆ. 9: ಪೂರ್ವ ಅಫ್ಘಾನಿಸ್ತಾನದಲ್ಲಿ ಅಫ್ಘಾನ್ ಸೇನೆಯ ಸಮವಸ್ತ್ರದಲ್ಲಿದ್ದ ವ್ಯಕ್ತಿಯೊಬ್ಬ ಅಮೆರಿಕ ಸೈನಿಕರ ಮೇಲೆ ಮಶೀನ್‌ ಗನ್‌ ನಿಂದ ಗುಂಡು ಹಾರಿಸಿದಾಗ ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ ಹಾಗೂ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಅಮೆರಿಕ ಸೇನೆ ಮತ್ತು ಇಬ್ಬರು ಹಿರಿಯ ಅಫ್ಘಾನ್ ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.

ಅಫ್ಘಾನ್ ಮತ್ತು ಅಮೆರಿಕ ಸೈನಿಕರ ನಡುವೆ ಶನಿವಾರ ನಡೆದ ಗುಂಡಿನ ಚಕಮಕಿಯಲ್ಲಿ ಎರಡೂ ಕಡೆಯಲ್ಲಿ ಸಾವುಗಳು ಸಂಭವಿಸಿವೆ. ಆದರೆ ಅಫ್ಘಾನ್ ಸೈನಿಕರ ಸಾವಿನ ಸಂಖ್ಯೆಯನ್ನು ಬಿಡುಗಡೆಗೊಳಿಸಲಾಗಿಲ್ಲ.

ನಂಗರ್‌ ಹಾರ್ ಪ್ರಾಂತದ ಶಿರ್ಝಾದ್ ಜಿಲ್ಲೆಯ ಆಡಳಿತ ಕೇಂದ್ರದಲ್ಲಿ ಅಮೆರಿಕ ಮತ್ತು ಅಫ್ಘಾನಿಸ್ತಾನದ ಸೈನಿಕರನ್ನೊಳಗೊಂಡ ಸಂಯುಕ್ತ ತಂಡವೊಂದು ‘ಕೀ ಲೀಡರ್ ಎಂಗೇಜ್‌ಮೆಂಟ್’ ಪೂರ್ಣಗೊಳಿಸಿದ ಬಳಿಕ ಗುಂಡಿನ ಕಾಳಗ ನಡೆಯಿತು ಎಂದು ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ಪಡೆಗಳ ವಕ್ತಾರರೊಬ್ಬರು ತಿಳಿಸಿದರು.

‘‘ಅಫ್ಘಾನ್ ಸೈನಿಕರ ಸಮವಸ್ತ್ರ ಧರಿಸಿದ ವ್ಯಕ್ತಿಯೋರ್ವ ಅಮೆರಿಕ ಮತ್ತು ಅಫ್ಘಾನ್ ಸೈನಿಕರನ್ನೊಳಗೊಂಡ ಸಂಯುಕ್ತ ತಂಡದ ಮೇಲೆ ಮಶೀನ್ ಗನ್‌ನಿಂದ ಗುಂಡು ಹಾರಿಸಿದನು ಎಂಬುದಾಗಿ ವರದಿಗಳು ತಿಳಿಸಿವೆ’’ ಎಂದು ಕರ್ನಲ್ ಸಾನಿ ಲೆಗೆಟ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

‘‘ನಾವು ಈಗಲೂ ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೆವೆ ಹಾಗೂ ಘಟನೆಗೆ ಕಾರಣ ಅಥವಾ ಉದ್ದೇಶ ಈ ಕ್ಷಣದವರೆಗೆ ತಿಳಿದಿಲ್ಲ’’ ಎಂದು ಅವರು ನುಡಿದರು.

ದಾಳಿಯ ಹೊಣೆಯನ್ನು ತಾಲಿಬಾನ್ ವಹಿಸಿಕೊಂಡಿಲ್ಲ ಹಾಗೂ ಇದು ಒಳಗಿನವರೇ ನಡೆಸಿದ ದಾಳಿಯೇ ಎನ್ನುವ ಬಗ್ಗೆ ಹಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

‘‘ಗುಂಡು ಹಾರಿಸಿದ ವ್ಯಕ್ತಿ ಕೂಡ ಘರ್ಷಣೆಯಲ್ಲಿ ಸಾವಿಗೀಡಾಗಿದ್ದಾನೆ’’ ಎಂದು ನಂಗರ್‌ಹಾರ್‌ನ ಪ್ರಾಂತೀಯ ಮಂಡಳಿ ಸದಸ್ಯ ಸೊಹ್ರಾಬ್ ಖಾದರ್ ತಿಳಿಸಿದರು.


ಅಫ್ಘಾನ್ ಸೇನೆಗೆ ನುಸುಳಿ ಬಂದ ಉಗ್ರನೇ?

ಅಮೆರಿಕ ಸೈನಿಕರ ಮೇಲೆ ಗುಂಡು ಹಾರಿಸಿದ ವ್ಯಕ್ತಿಯು ಜಂಟಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಫ್ಘಾನ್ ಸೈನಿಕರೊಂದಿಗೆ ನುಸುಳಿ ಬಂದಿದ್ದನು ಎಂದು ನಂಗರ್‌ ಹಾರ್‌ನ ಪ್ರಾಂತೀಯ ಮಂಡಳಿ ಸದಸ್ಯ ಸೊಹ್ರಾಬ್ ಖಾದರ್ ಹೇಳಿದರು. ಆದರೆ, ಅವನು ಯಾವ ಭಯೋತ್ಪಾದಕ ಗುಂಪಿಗೆ ಸೇರಿದವನು ಎಂಬುದನ್ನು ಅವರು ಹೇಳಲಿಲ್ಲ.

ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಅಫ್ಘಾನ್ ಸೈನಿಕರಿಗೆ ತರಬೇತಿ ನೀಡುವುದಕ್ಕಾಗಿ ಅಮೆರಿಕದ ಸುಮಾರು 14,000 ಸೈನಿಕರು ಅಫ್ಘಾನಿಸ್ತಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News