ಆ.5ರಿಂದೀಚಿಗೆ ಕಾಶ್ಮೀರದಲ್ಲಿ ಉಗ್ರವಾದವನ್ನು ಅಪ್ಪುವ ಯುವಕರ ಸಂಖ್ಯೆಯಲ್ಲಿ ಇಳಿಕೆ: ವರದಿ

Update: 2020-02-09 16:47 GMT

ಶ್ರೀನಗರ,ಫೆ.9: ಕಳೆದ ವರ್ಷದ ಆ.5ರಂದು 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಕಾಶ್ಮೀರದಲ್ಲಿ ಉಗ್ರವಾದವನ್ನು ಸೇರುವ ಯುವಕರ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಯಾಗಿದೆ ಎಂದು ಭದ್ರತಾ ಏಜೆನ್ಸಿಗಳು ಸಿದ್ಧಪಡಿಸಿರುವ ವರದಿಯೊಂದು ತಿಳಿಸಿದೆ.

ಆ.5ರಿಂದೀಚಿಗೆ ಪ್ರತಿ ತಿಂಗಳು ಸರಾಸರಿ ಐವರು ಕಾಶ್ಮೀರಿ ಯುವಕರು ಉಗ್ರರನ್ನು ಸೇರಿಕೊಂಡಿದ್ದಾರೆ. ಇದಕ್ಕೂ ಮೊದಲು ಇಂತಹವರ ಸಂಖ್ಯೆ ಪ್ರತಿ ತಿಂಗಳಿಗೆ 14ರಷ್ಟಿತ್ತು ಎಂದು ಅದು ಹೇಳಿದೆ.

ಆ.5ರ ಮೊದಲು ಮತ್ತು ನಂತರದ ಉಗ್ರವಾದ ಸಂಬಂಧಿತ ಬೆಳವಣಿಗೆಗಳನ್ನು ಹೋಲಿಸಿರುವ ವರದಿಯು,ಮೊದಲು ಉಗ್ರರ ಅಂತ್ಯಸಂಸ್ಕಾರದಲ್ಲಿ 10,000ಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದರು. ಅಂತಹ ಸಮಾವೇಶ ಈಗ ಗತವಿಷಯವಾಗಿದೆ. ಇವು ಉಗ್ರವಾದಕ್ಕೆ ಯುವಕರನ್ನು ಭರ್ತಿ ಮಾಡಿಕೊಳ್ಳಲು ಪ್ರಶಸ್ತ ಸಂದರ್ಭಗಳಾಗಿರುತ್ತಿದ್ದವು. ಈಗ ಅಂತ್ಯಸಂಸ್ಕಾರ ಸ್ಥಳಗಳಲ್ಲಿ ಮೃತ ಉಗ್ರರ ಬಂಧುಗಳು ಮಾತ್ರ ಬೆರಳೆಣಿಕೆಯ ಸಂಖ್ಯೆಯಲ್ಲಿ ಹಾಜರಿರುವುದನ್ನು ಕಾಣಬಹುದು ಎಂದಿದೆ.

ಭದ್ರತಾ ಪಡೆಗಳ ಮುತ್ತಿಗೆಯಲ್ಲಿ ಸಿಕ್ಕಿ ಹಾಕಿಕೊಂಡ ಭಯೊತ್ಪಾದಕರು ತಮ್ಮ ಕುಟುಂಬ ಸದಸ್ಯರಿಗೆ ಮಾಡುತ್ತಿದ್ದ ಕೊನೆಯ ದೂರವಾಣಿ ಕರೆ ಯುವಜನರು ಉಗ್ರವಾದವನ್ನು ಸೇರುವಂತೆ ಪ್ರಚೋದಿಸುತ್ತಿದ್ದ ಇನ್ನೊಂದು ಕಾರಣವಾಗಿತ್ತು. ಇಂತಹ ಕರೆಗಳ ಧ್ವನಿಮುದ್ರಣಗಳು ಜನರ ನಡುವೆ ಹರಿದಾಡುತ್ತಿದ್ದವು ಮತ್ತು ಬಂದೂಕನ್ನು ಕೈಗೆತ್ತಿಕೊಳ್ಳಲು ಕೆಲವು ಯುವಕರನನ್ನು ಪ್ರಚೋದಿಸುತ್ತಿದ್ದವು. ಆದರೆ ಆ.5ರಬಳಿಕ ಇಂತಹ ಕರೆಗಳು ವರದಿಯಾಗಿಲ್ಲ. ಸಂವಹನಗಳ ಮೇಲಿನ ನಿರ್ಬಂಧ ಮತ್ತು ಪರಿಸ್ಥಿತಿಯಲ್ಲಿ ಬದಲಾವಣೆ ಇದಕ್ಕೆ ಕಾರಣವಾಗಿವೆ ಎಂದು ವರದಿಯು ತಿಳಿಸಿದೆ.

ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಕಾಳಗದ ವೇಳೆ ಮತ್ತು ಇತರ ಸಂದರ್ಭಗಳಲ್ಲಿಕಲ್ಲು ತೂರಾಟದ ಘಟನೆಗಳಲ್ಲಿಯೂ ಗಮನಾರ್ಹ ಇಳಿಕೆಯಾಗಿದೆ ಎಂದಿರುವ ವರದಿಯು,ಇದರಿಂದಾಗಿ ಸಹಜವಾಗಿಯೇ ಅಶ್ರುವಾಯು ಮತ್ತು ಪೆಲೆಟ್ ಗುಂಡುಗಳ ಬಳಕೆಯು ಕಡಿಮೆಯಾಗಿದೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ರಕ್ಷಣೆ ಸಂದರ್ಭಗಳಲ್ಲಿ ಸಾವುಗಳ ಸಂಖ್ಯೆ ನಗಣ್ಯವಾಗಿದೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News