ಫೆ.12: ಮಂಗಳೂರು ತಾಪಂ ನೂತನ ಕಟ್ಟಡ ಲೋಕಾರ್ಪಣೆ
ಮಂಗಳೂರು, ಫೆ.9: ನಗರದ ಮಿನಿ ವಿಧಾನಸೌಧ ಪಕ್ಕದಲ್ಲಿ ಸುಮಾರು 4.25 ಕೋಟಿ ರೂ. ಅನುದಾನದಲ್ಲಿ ಮಂಗಳೂರು ತಾಲೂಕು ಪಂಚಾಯತ್‌ನ ನೂತನ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಫೆ.12ರಂದು ಬೆಳಗ್ಗೆ 9:30ಕ್ಕೆ ಲೋಕಾರ್ಪಣೆಗೊಳ್ಳಲಿದೆ.
ನಗರದಲ್ಲಿ ರವಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಮುಹಮ್ಮದ್ ಮೋನು, ನೂತನ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕರಾದ ಯು.ಟಿ. ಖಾದರ್, ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಸಂಸದ ನಳಿನ್ ಕುಮಾರ್ ಕಟೀಲು, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ವಿಧಾನ ಪರಿಷತ್ ಸದಸ್ಯರಾದ ಹರೀಶ್‌ಕುಮಾರ್, ಐವನ್ ಡಿಸೋಜ, ಬಿ.ಎಂ. ಫಾರೂಕ್, ಭೋಜೆಗೌಡ ಮತ್ತಿತರ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು.
ತಾಪಂ ನೂತನ ಕಟ್ಟಡದ ಶಿಲಾನ್ಯಾಸವನ್ನು 2017ರ ಮೇ ತಿಂಗಳಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮಾನಾಥ ರೈ ಹಾಗೂ ಶಾಸಕ ಯು.ಟಿ. ಖಾದರ್ ನೆರವೇರಿಸಿದ್ದರು. ಜಿಲ್ಲಾ ಪಂಚಾಯತ್‌ನ ಅನುದಾನದಲ್ಲಿ ಕಟ್ಟಡ ಕಾಮಗಾರಿ ಇದೀಗ ಸರ್ವ ವ್ಯವಸ್ಥೆಗಳೊಂದಿಗೆ ಮುಕ್ತಾಯವಾಗಿದೆ ಎಂದರು.
ನೂತನ ಕಟ್ಟಡದಲ್ಲಿ ಆರು ಮಳಿಗೆಗಳ ವಾಣಿಜ್ಯ ಸಂಕೀರ್ಣವಿದ್ದು, ಇದರಿಂದ ತಿಂಗಳಿಗೆ ಸುಮಾರು ಒಂದು ಲಕ್ಷ ರೂಪಾಯಿ ಆದಾಯ ದೊರೆಯುವ ನಿರೀಕ್ಷೆ ಇದೆ ಎಂದರು.
ನಗರದ ವೆನ್ಲಾಕ್ ಆಸ್ಪತ್ರೆಯಿಂದ ಪೊಲೀಸ್ ಆಯುಕ್ತಾಲಯದವರೆಗಿನ ಯಾವುದೇ ಸರಕಾರಿ ಕಟ್ಟಡಗಳಲ್ಲಿ ಆದಾಯ ತಂದುಕೊಡುವ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಿಲ್ಲ. ಈಗ ತಾಲೂಕು ಪಂಚಾಯತ್‌ನಲ್ಲಿ ಆರಂಭವಾಗಿರುವುದು ವಿಶೇಷ ಎಂದು ಮುಹಮ್ಮದ್ ಮೋನು ತಿಳಿಸಿದರು.
ಬಾಡಿಗೆಗೂ ಸಿಗಲಿದೆ ಮೀಟಿಂಗ್ ಹಾಲ್: ನೂತನ ಕಟ್ಟಡದಲ್ಲಿ ಬೇಸ್‌ಮೆಂಟ್ ಸೇರಿ ಮೂರು ಅಂತಸ್ತುಗಳಿವೆ. ಬೇಸ್‌ಮೆಂಟ್‌ನಲ್ಲಿ ಪಾರ್ಕಿಂಗ್ ಸ್ಥಳಾವಕಾಶ ಇದ್ದರೆ, ತಳ ಅಂತಸ್ತಿನಲ್ಲಿ ಆಡಳಿತ ಕಚೇರಿ, ಕಾರ್ಯ ನಿರ್ವಹಣಾಧಿಕಾರಿ ಕಚೇರಿ, ಅಕೌಂಟ್ ಸೆಕ್ಷನ್ ಕಾರ್ಯ ನಿರ್ವಹಿಸಲಿದೆ ಎಂದು ಮುಹಮ್ಮದ್ ಮೋನು ಹೇಳಿದರು.
ಮೊದಲನೇ ಮಹಡಿಯನ್ನು ಅಧ್ಯಕ್ಷ- ಉಪಾಧ್ಯಕ್ಷರ ಕೊಠಡಿ, ಸ್ಥಾಯಿ ಸಮಿತಿ ಮೀಟಿಂಗ್ ಹಾಲ್, ಅಕ್ಷರ ದಾಸೋಹ ಕಚೇರಿಗೆ ಮೀಸಲಿರಿಸಲಾಗಿದೆ. ಎರಡನೇ ಮಹಡಿಯಲ್ಲಿ 600 ಚದರ ಅಡಿ ವಿಸ್ತೀರ್ಣದ 300 ಜನರು ಕೂರಬಹುದಾದ ಮೀಟಿಂಗ್ ಹಾಲ್ ವ್ಯವಸ್ಥೆ ಗೊಳಿಸಲಾಗಿದೆ. ಇದರಲ್ಲಿ ಸರಕಾರಿ ಕಾರ್ಯಕ್ರಮಗಳು ಅಲ್ಲದೆ ಖಾಸಗಿ ಕಾರ್ಯಕ್ರಮಗಳಿಗೆ ಬಾಡಿಗೆ ಆಧಾರದಲ್ಲಿ ನೀಡುವ ಯೋಜನೆ ಇದೆ. ತಳ ಅಂತಸ್ತಿನ ರಸ್ತೆಬದಿಯಲ್ಲಿ ಆರು ಅಂಗಡಿಗಳ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲಾಗಿದ್ದು, ಶೀಘ್ರದಲ್ಲಿ ಹರಾಜಿನ ಮೂಲಕ ಇವುಗಳನ್ನು ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ತಾಪಂ ಉಪಾಧ್ಯಕ್ಷೆ ಪೂರ್ಣಿಮಾ ಪೂಜಾರಿ, ಕಾರ್ಯನಿರ್ವಾಹಕ ಅಧಿಕಾರಿ ಜಿ.ಸದಾನಂದ, ಇಂಜಿನಿಯರ್ ಪ್ರದೀಪ್ ಭಟ್ ಇದ್ದರು.